ಮದ್ದೂರು: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಡಿಪ್ಲೊಮಾ ಮತ್ತು ಕಾನೂನು ಕಾಲೇಜುಗಳಿಗೆ ಅನುಮೋದನೆ ದೊರಕುವ ಸಂಭವವಿದೆ ಎಂದು ಶಾಸಕ ಕೆ.ಎಂ.ಉದಯ್ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಸೋಮವಾರ ಒಂದು ಕೋಟಿ ರೂ. ವೆಚ್ಚದಲ್ಲಿ ಹೆಚ್ಚುವರಿ ತರಗತಿಗಳ ಕೊಠಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಇತ್ತೀಚೆಗೆ ಮದ್ದೂರಿನಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮದ್ದೂರು ಕ್ಷೇತ್ರದಲ್ಲಿ ಡಿಪ್ಲೋಮಾ ಮತ್ತು ಕಾನೂನು ಕಾಲೇಜು ನಿರ್ಮಾಣ ಮಾಡಲು ಅನುದಾನ ನೀಡುವಂತೆ ಮನವಿ ಮಾಡಿದ್ದೆ. ಹೀಗಾಗಿ ಮುಂದಿನ ಬಜೆಟ್ ನಲ್ಲಿ ಅನುಮೋದನೆ ದೊರೆಯುವ ಸಾಧ್ಯತೆ ಇದೆ ಎಂದರು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಖಾಸಗಿ ಶಾಲಾ ಕಾಲೇಜುಗಳಿಗೆ ದುಬಾರಿ ಶುಲ್ಕ ನೀಡಿ ವಿದ್ಯಾಭ್ಯಾಸ ಮಾಡುವುದು ಇಂದಿನ ದಿನಗಳಲ್ಲಿ ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಖಾಸಗಿ ಶಾಲೆಗಳು ನೀಡುವ ಸೌಲಭ್ಯ ನೀಡಿದರೆ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಲು ಸಾಧ್ಯ ಎಂದರು.
ಈಗಾಗಲೇ ಮಹಿಳಾ ಕಾಲೇಜಿನಲ್ಲಿ ಸಂಶೋಧನಾ ಕೇಂದ್ರ ತೆರೆಯಲು ಸರ್ಕಾರಕ್ಕೆ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೀಗಾಗಿ ಅವಶ್ಯವಿರುವ ಹೆಚ್ಚುವರಿ ಕೊಠಡಿಗಳನ್ನು 5 ಕೋಟಿ ರೂ.ಗೂ ಹೆಚ್ಚಿನ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.
ಶಿಕ್ಷಣ ಕ್ಷೇತ್ರಕ್ಕೆ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಸರ್ಕಾರದಿಂದ ಹೆಚ್ಚಿನ ಅನುದಾನಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ದೇಶಕ್ಕೆ ಕೊಡುಗೆಯಾಗಿ ಬೆಳೆಯಬೇಕು. ಶಾಲೆಯಲ್ಲಿ ಶ್ರದ್ಧೆಯಿಂದ ಕಲಿತು ಪಾಲಕರಿಗೆ, ಶಿಕ್ಷಕರಿಗೆ ಹಾಗೂ ನಾಡಿಗೆ ಕೀರ್ತಿ ತರಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಜಯಂತಿಲಾಲ್ ಪಟೇಲ್ ಮಾತನಾಡಿ, ಶಾಸಕ ಕೆ.ಎಂ.ಉದಯ್ ಅವರು ಶಿಕ್ಷಣಕ್ಕೆ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಹಾಗೂ ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಮಗ್ರ ಅಭಿವೃದ್ಧಿ ಮಾಡುವ ದೃಷ್ಟಿಯಿಂದ ಸರ್ಕಾರದಿಂದ ವಿಶೇಷ ಅನುದಾನ ಅಭಿವೃದ್ಧಿ ಮಾಡುತ್ತಿರುವುದರಿಂದ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿನಿಯರಿಗೆ ತುಂಬ ಅನುಕೂಲವಾಗುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಪುರಸಭೆ ಅಧ್ಯಕ್ಷೆ ಕೋಕಿಲ ಅರುಣ್, ಸದಸ್ಯರಾದ ಸಿದ್ದರಾಜು, ಮೋಹನ್, ಗ್ರಾ.ಪಂ. ಸದಸ್ಯರಾದ ಮಾದೇಶ್, ಬಸವರಾಜು ಪ್ರಾಂಶುಪಾಲ ಕೆ.ಬಿ. ಪ್ರೊ.ನಾರಾಯಣ್ ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರಾದ ಜಯಂತಿ ಲಾಲ್ ಪಟೇಲ್, ಸಂತೋಷ್, ದಾಸೇಗೌಡ, ಮನ್‌ಮುಲ್ ನಿರ್ದೇಶಕ ಹರೀಶ್‌ಬಾಬು ಇದ್ದರು.