ಮದ್ದೂರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ಕೆ.ಎಂ.ಉದಯ್ ಮಾತನಾಡಿದರು. ಸೋಮಶೇಖರ್, ನಾಗಲಕ್ಷ್ಮೀ, ಎಲ್.ಸಂದೀಪ್, ಚಿದಂಬರಮೂರ್ತಿ, ಮಧುಸೂದನ್, ಪ್ರೀತಾ ಇದ್ದರು. 
ಜಿಲ್ಲೆ

ಎಸ್ಸಿ, ಎಸ್ಟಿಗೆ ಮೀಸಲಾದ ಅನುದಾನ ಸದುದ್ದೇಶಕ್ಕೆ ಬಳಕೆಯಾಗಲಿ

ಎಂ.ರವಿ

ಮದ್ದೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಸದೆ ನಿಗದಿತ ಉದ್ದೇಶಕ್ಕೆ ಬಳಸಬೇಕು ಎಂದು ಶಾಸಕ ಕೆ.ಎಂ.ಉದಯ್ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲೂಕಿನಲ್ಲಿ ಜನಸಂಪರ್ಕ ಸಭೆ ಮಾಡಿದಾಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಾಗರಿಕರು ಹಲವಾರು ಸಮಸ್ಯೆಗಳನ್ನು ನಿವೇದಿಸಿಕೊಂಡಿದ್ದಾರೆ. ಅವರ ಎಲ್ಲ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು. ಮುಂದಿನ ದಿನಗಳಲ್ಲಿ ಸಮಸ್ಯೆಗಳಿಗೆ ಮುಕ್ತಿ ಕೊಟ್ಟು ಅಭಿವೃದ್ಧಿಯ ಪಥದೆಡೆಗೆ ಕ್ಷೇತ್ರವನ್ನು ಕೊಂಡೊಯ್ಯಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮದ್ದೂರು ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಸ್ಮಶಾನದ ಅಭಿವೃದ್ಧಿಗೆ 20 ಲಕ್ಷ ರೂ. ವಿಶೇಷ ಅನುದಾನ ನೀಡುವಂತೆ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಶೀಘ್ರದಲ್ಲೇ ಹಣ ಬಿಡುಗಡೆಯಾಗಲಿದೆ. ಆ ಹಣದಿಂದ ಎಲ್ಲ ಸ್ಮಶಾನಗಳನ್ನು ಅಭಿವೃದ್ಧಿಪಡಿಸಿ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.

ಗ್ರಾಮ ಪಂಚಾಯಿತಿಗಳಲ್ಲಿ ಎಸ್ಸಿ, ಎಸ್ಟಿ ಜನರಿಗೆ ಮೀಸಲಾಗಿರುವ ಶೇ. 25ರ ಅನುದಾನವನ್ನು ಸದುದ್ದೇಶಗಳಿಗೆ ಬಳಕೆ ಮಾಡಬೇಕು. ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟಬೇಕು. ಪಟ್ಟಣದಲ್ಲಿ ಡಾ.ಬಾಬು ಜಗಜೀವನರಾಮ್ ಅವರ ಭವನವನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಚಾಮನಹಳ್ಳಿ ಗ್ರಾಮದಲ್ಲಿ ಬಾಬು ಜಗಜೀವನರಾಮ್ ಅವರ ಭವನದ ನಿರ್ಮಾಣ ಪೂರ್ಣಗೊಳಿಸಲು ಸಂಬಂಧಿಸಿದವರು ಕ್ರಮ ವಹಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸಿ.ನಾಗಲಕ್ಷ್ಮೀ ಮಾತನಾಡಿ, ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ 14 ಅಂಬೇಡ್ಕರ್ ಭವನಗಳು ನಿರ್ಮಾಣ ಹಂತದಲ್ಲಿದ್ದು, 6 ಅಂಬೇಡ್ಕರ್ ಭವನಗಳು ಪೂರ್ಣಗೊಂಡಿವೆ. ಅವುಗಳನ್ನು ಶೀಘ್ರವಾಗಿ ಶಾಸಕರ ನೇತೃತ್ವದಲ್ಲಿ ಉದ್ಘಾಟಿಸಿ, ಗ್ರಾಮ ಪಂಚಾಯಿತಿಗೆ ನಿರ್ವಹಣೆ ಮಾಡಲು ನೀಡಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಜಾಗೃತಿ ಸಮಿತಿ ಸದಸ್ಯ ಚಿದಂಬರಮೂರ್ತಿ ಮಾತನಾಡಿ, ಟಿಎಸ್‌ಪಿ ಮತ್ತು ಎಸ್‌ಎಸ್‌ಪಿ ಯೋಜನೆಗಳ ಅನುದಾನವನ್ನು ಎಸ್ಸಿ, ಎಸ್ಟಿ ಜನರು ಇರುವ ಕಡೆ ಬಳಕೆ ಮಾಡಬೇಕು. ದುರ್ಬಳಕೆ ಮಾಡಿದರೆ ಸಂಬಂಧಿಸಿದ ಅಧಿಕಾರಿಗಳು ಶಿಸ್ತುಕ್ರಮ ಎದುರಿಸಬೇಕಾಗುತ್ತದೆ. ಅಂತಹದ್ದಕ್ಕೆ ಅವಕಾಶ ನೀಡದೆ ನಿರ್ದಿಷ್ಟ ಉದ್ದೇಶಗಳಿಗೆ ನಿಯಮನುಸಾರ ಹಣವನ್ನು ಬಳಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ತಹಸೀಲ್ದಾರ್ ಕೆ.ಎಸ್.ಸೋಮಶೇಖರ್, ತಾಪಂ ಇಒ ಎಲ್.ಸಂದೀಪ್, ಸಮಿತಿ ಸದಸ್ಯರಾದ ಚಿದಬರಂ ಮೂರ್ತಿ, ಮಧುಸೂಧನ್, ಪ್ರೀತಾ, ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸಿ.ನಾಗಲಕ್ಷ್ಮೀ, ತಾಲೂಕು ಮಟ್ಟದ ಅಧಿಕಾರಿಗಳಾದ ಸಿ.ಎಚ್.ಕಾಳೀರಯ್ಯ, ಕೆ.ಎಂ.ರೇಖಾ, ಬಸವರಾಜು, ಕೋದಂಡರಾಮ, ಮೋಹನ್, ನಾರಾಯಣ್, ಶಿವರಾಜು ಸೇರಿದಂತೆ ಇತರರಿದ್ದರು.