ರಟ್ಟಿಹಳ್ಳಿ: ಒಳ್ಳೆಯ ಉದ್ದೇಶ ಮತ್ತು ಧರ್ಮದ ತಳಹದಿಯ ಮೇಲೆ ನಡೆಯುವ ಕಾರ್ಯಗಳು ಉತ್ತಮ ಪ್ರತಿಫಲ ನೀಡುತ್ತವೆ ಎಂದು ಶಾಸಕ ಯು.ಬಿ. ಬಣಕಾರ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಕಬ್ಬಿಣಕಂಥಿ ಮಠದಲ್ಲಿ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಭಾನುವಾರ ಏರ್ಪಡಿಸಿದ್ದ 2022-23ನೆ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಆದರ್ಶಪ್ರಾಯವಾದ ಜೀವನವನ್ನು ಬೆಳೆಸಿಕೊಳ್ಳಬೇಕು. ವೀರಶೈವ ಪಂಚಮಸಾಲಿ ಸಮಾಜದ ಬೇಡಿಕೆಯಂತೆ ಮುಂದಿನ ದಿನಗಳಲ್ಲಿ ಸಮುದಾಯ ಭವನಕ್ಕೆ ಅನುದಾನ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.
ತಿಪ್ಪಾಯಿಕೊಪ್ಪ ಮಠದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ಪಾಲಕರು ಮಕ್ಕಳಿಗೆ ಸಂಸ್ಕಾರ ಕಲಿಸಬೇಕು ಮತ್ತು ವಿದ್ಯಾರ್ಥಿಗಳಿಗೆ ನೀಡುವ ಪುರಸ್ಕಾರದಿಂದ ಅವರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.
ಸಮಾಜದ ತಾಲೂಕು ಅಧ್ಯಕ್ಷ ಪರಮೇಶ್ವರಪ್ಪ ಹಲಗೇರಿ ಮಾತನಾಡಿ, ರಟ್ಟಿಹಳ್ಳಿ ತಾಲೂಕಿನಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಸಮಾಜದ ಕಾರ್ಯಕ್ರಮಗಳ ನಿಮಿತ್ತ ಪಟ್ಟಣದಲ್ಲಿ ನಿವೇಶನ ಮತ್ತು ಸಮುದಾಯ ಭವನಕ್ಕೆ ಶಾಸಕರು ಅನುದಾನ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಸಾನ್ನಿಧ್ಯ ವಹಿಸಿದ್ದ ಹರಿಹರ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮತ್ತು ವಸತಿ ವ್ಯವಸ್ಥೆಯನ್ನು ಮಠದ ವತಿಯಿಂದ ಮಾಡಲಾಗುವುದು ಎಂದರು.
ಜಿಪಂ ಮಾಜಿ ಸದಸ್ಯ ಪಿ.ಡಿ.ಬಸನಗೌಡ್ರ, ಸಮಾಜದ ಯುವ ಘಟಕದ ಜಿಲ್ಲಾಧ್ಯಕ್ಷ ಮಾಲತೇಶ ಬೆಳಕೇರಿ, ಸಾಹಿತಿ ಡಾ. ನಿಂಗಪ್ಪ ಚಳಗೇರಿ ಇತರರು ಮಾತನಾಡಿದರು. ಸಮಾಜದ ನಿಕಟಪೂರ್ವ ಅಧ್ಯಕ್ಷ ವೀರನಗೌಡ್ರ ಪ್ಯಾಟಿಗೌಡ್ರು, ಈರಣ್ಣ ಕುಪೇಲೂರು, ರಾಜನಗೌಡ ಪಾಟೀಲ, ರಾಘವೇಂದ್ರ ಹರವಿಶೆಟ್ಟರ್, ಕಾವ್ಯಾ ಪಾಟೀಲ, ನಾಗನಗೌಡ ಪಾಟೀಲ, ಕಾಂತೇಶ ಪಾಟೀಲ, ಶಿವಾನಂದ ಪೂಜಾರ, ಶಂಕರಗೌಡ ಬುಡೇಪನಹಳ್ಳಿ ಇತರರು ಉಪಸ್ಥಿತರಿದ್ದರು. ರಾಜು ಹರವಿಶೆಟ್ಟರ್, ಸಿ.ಎಸ್. ಚಕ್ರಸಾಲಿ ನಿರ್ವಹಿಸಿದರು.