ಶಿವಮೊಗ್ಗ: ನಗರ ಹೊರವಲಯದ ಗೋವಿಂದಾಪುರದಲ್ಲಿ ನಿರ್ಮಾಣವಾಗಿರುವ ಆಶ್ರಯ ಬಡಾವಣೆಗೆ ಮೂಲ ಸೌಕರ್ಯ ಕಾಮಗಾರಿಗಳಿಗೆ ರಾಜ್ಯ ಸರ್ಕಾರದಿಂದ 10 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.
ನಗರ ಪಾಲಿಕೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಗೋವಿಂದಾಪುರದಲ್ಲಿ ಆಶ್ರಯ ಮನೆಗಳನ್ನು ನಿರ್ಮಿಸಿ ಕುಡಿಯುವ ನೀರು, ವಿದ್ಯುತ್, ಯುಜಿಡಿ ಸಂಪರ್ಕ ಕಲ್ಪಿಸದೆ ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಆಶ್ರಯ ಮನೆ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸುವಾಗಲೇ ಮೂಲ ಸೌಕರ್ಯಕ್ಕೆ ಅನುದಾನ ಹೇಗೆ ಒದಗಿಸಬೇಕು ಎಂಬುದನ್ನು ಯೋಚಿಸಬೇಕಿತ್ತು. ಯೋಜನೆ ತಡವಾದ ಕಾರಣ ಫಲಾನುಭವಿಗಳಿಗೂ ಆರ್ಥಿಕ ಹೊರೆಯಾಗಿದೆ. ಇದರಲ್ಲಿ ಅಧಿಕಾರಿಗಳ ಲೋಪವೂ ಕಾಣುತ್ತಿದೆ ಎಂದು ಗರಂ ಆದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಕೆ.ಎಸ್.ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವರಾಗಿದ್ದರು. ಗೋವಿಂದಾಪುರ ಗ್ರಾಮೀಣ ಭಾಗಕ್ಕೆ ಸೇರುವುದರಿಂದ ಪಂಚಾಯತ್‌ರಾಜ್ ಇಲಾಖೆಯಿಂದ ಕುಡಿಯುವ ನೀರಿನ ಯೋಜನೆಗೆ ಅನುದಾನ ಒದಗಿಸಲಾಗಿತ್ತು. ಉಳಿದ ಮೂಲ ಸೌಕರ್ಯಗಳಿಗೆ ನಗರ ಪಾಲಿಕೆಯಿಂದಲೇ 10 ಕೋಟಿ ರೂ. ಒದಗಿಸಲು ನಿರ್ಧರಿಸಲಾಗಿತ್ತು ಎಂದು ತಿಳಿಸಿದರು.
ಈ ಬಗ್ಗೆ ನಾನು ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳೊಂದಿಗೆ ಈಗಾಗಲೇ ಸಭೆ ನಡೆಸಿದ್ದೇನೆ. ಪಾಲಿಕೆಯಿಂದ ಅನುದಾನ ಒದಗಿಸುವ ಬಗ್ಗೆ ಆಯುಕ್ತರು ಭರವಸೆ ನೀಡಿದ್ದರೆ. ಹೀಗಾಗಿ ಕುಡಿಯುವ ನೀರು, ರಸ್ತೆ, ಯುಜಿಡಿ ಸಂಪರ್ಕಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದರು.
ಸ್ಪಷ್ಟನೆ ನೀಡಿದ ಡಾ. ಕವಿತಾ ಯೋಗಪ್ಪನವರ್, ಪಾಲಿಕೆ ಸಾಮಾನ್ಯ ನಿಧಿಯಲ್ಲಿ 17 ಕೋಟಿ ರೂ. ಇದೆ. ಇದರಿಂದ 10 ಕೋಟಿ ರೂ. ನೀಡುವುದು ಕಷ್ಟವಾಗಬಹುದು ಎಂದು ಸಂದೇಹ ವ್ಯಕ್ತಪಡಿಸಿದರು. ಇದಕ್ಕೆ ಎಸ್.ಎನ್.ಚನ್ನಬಸಪ್ಪ ಆಕ್ಷೇಪ ವ್ಯಕ್ತಪಡಿಸಿದರು. ಅಂದು ಸಭೆಯಲ್ಲಿ ಅನುದಾನ ನೀಡುತ್ತೇನೆ ಎಂದು ಒಪ್ಪಿಕೊಂಡ ನೀವು ಈಗ ಆಗುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ಅಂತಿಮವಾಗಿ ಮಧು ಬಂಗಾರಪ್ಪ ಸರ್ಕಾರದಿಂದ ಅನುದಾನ ತರುವ ಭರವಸೆ ನೀಡಿದ ಬಳಿಕ ಆಶ್ರಯ ಬಡಾವಣೆ ವಿಚಾರವನ್ನು ಕೈ ಬಿಡಲಾಯಿತು.
ಶಾಸಕಿ ಶಾರದಾ ಪೂರ‌್ಯಾನಾಯ್ಕಾ, ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು, ಭದ್ರಾ ಕಾಡಾ ಅಧ್ಯಕ್ಷ ಡಾ. ಅಂಶುಮಂತ್, ಡಿಸಿ ಗುರುದತ್ತ ಹೆಗಡೆ ಸಭೆಯಲ್ಲಿ ಭಾಗವಹಿಸಿದ್ದರು.