ಕುಕನೂರು: ಯಲಬುರ್ಗಾ ಸರ್ಕಾರಿ ಆಸ್ಪತ್ರೆಗೆ ಮಂಜೂರಾಗಿದ್ದ 1.5 ಕೋಟಿ ರೂ. ಅನುದಾನ ಇದೀಗ ಅನ್ಯ ಉದ್ದೇಶಗಳಿಗೆ ಬಳಕೆ ಆಗುತ್ತಿದ್ದು, ಇದು ಹಾಲಿ ಮತ್ತು ಮಾಜಿ ಸಚಿವರ ಮುಸಿಕಿನ ಗುದ್ದಾಟಕ್ಕೆ ಸಾಕ್ಷಿಯಾಗಿದೆ. ಕ್ಷೇತ್ರಾದ್ಯಂತ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
2017ರಲ್ಲಿ ಎಚ್‌ಕೆಆರ್‌ಡಿಪಿ, ಕೆಕೆಆರ್‌ಡಿಪಿಯಿಂದ ಯಲಬುರ್ಗಾ ಸರ್ಕಾರಿ ಆಸ್ಪತ್ರೆಗೆ ಬಸವರಾಜ ರಾಯರಡ್ಡಿ ಸಚಿವರಾಗಿದ್ದಾಗ 1.5 ಕೋಟಿ ರೂ. ವೆಚ್ಚದ ಸಿಟಿಸ್ಕಾೃನ್ ಮಂಜೂರು ಮಾಡಿಸಿದ್ದರು. ಆದರೆ, ಸಿಟಿಸ್ಕ್ಯಾನ್ ಮಷಿನ್‌ಗೆ ಮಂಜೂರಾದ ಅನುದಾನವನ್ನು ನಿಗದಿತ ಕಾರ್ಯಕ್ಕೆ ಬಳಸದೆ ಅನ್ಯ ಕಾಮಗಾರಿಗಳ ಬಳಕೆಗೆ ಬದಲಾವಣೆ ಆದೇಶ ಮಾಡಲಾಗಿದೆ. ಸಿಟಿಸ್ಕ್ಯಾನ್ಗೆ ಮಂಜೂರಾದ 1.5 ಕೋಟಿ ರೂ.ನಲ್ಲಿ 30 ಲಕ್ಷ ರೂ.ಅನ್ನು ಸಚಿವ ಹಾಲಪ್ಪ ಆಚಾರ್ ತವರು ಗ್ರಾಮವಾದ ಮಸಬಹಂಚಿನಾಳದ ಪ್ರೌಢಶಾಲೆಗೆ ಪೀಠೋಪಕರಣ ಹಾಗೂ ಪ್ರಯೋಗಾಲಯ ಸಾಮಗ್ರಿಗೆ ಬಳಕೆಯಾಗಿದೆ. ಇನ್ನುಳಿದ 1.20 ಕೋಟಿ ರೂ. ಯಲಬುರ್ಗಾದ ಬುದ್ಧ, ಬಸವ, ಅಂಬೇಡ್ಕರ್ ಭವನದ ಅಡುಗೆ ಹಾಗೂ ಊಟದ ಕೋಣೆ ನಿರ್ಮಾಣಕ್ಕೆ ಬದಲಾವಣೆ ಕೋರಲಾಗಿತ್ತು. ಆದರೆ ಈಗಾಗಲೇ ಎರಡು ಬಾರಿ ಬದಲಾವಣೆ ಆದೇಶವಾಗಿದ್ದರಿಂದ ಈ ಕಾಮಗಾರಿಗೆ ಮಂಜೂರಾತಿ ಸಿಕ್ಕಿಲ್ಲ.
1.5 ಕೋಟಿ ವೆಚ್ಚದಲ್ಲಿ ಸಿಟಿ ಸ್ಕಾೃನ್‌ಗೆ ಮಂಜೂರಾತಿ ಕೊಡಿಸಿದ್ದೆ. ಆದರೆ, ಆ ಹಣವನ್ನು ಬೇರೆ ಕಾಮಗಾರಿಗೆ ಬಳಸುವುದು ಎಷ್ಟು ಸೂಕ್ತ? ಅನುದಾನ ಕೊರತೆ ಆಗಿದ್ದರೆ ಒಂದು ಕೋಟಿ ರೂ. ಹೆಚ್ಚುವರಿ ಅನುದಾನ ನೀಡಿ ಸಿಟಿಸ್ಕ್ಯಾನ್ ಮಷಿನ್ ತರಬೇಕಿತ್ತು. ಮಂಜೂರಾದ ಅನುದಾನ ಬೇರೆ ಕಾಮಗಾರಿಗೆ ಬಳಕೆ ಮಾಡಿಕೊಂಡು ಮರು ಪ್ರಸ್ತಾವನೆ ಸಲ್ಲಿಸಿದ್ದಾರೆಯೇ ವಿನಃ ಸಿಟಿಸ್ಕ್ಯಾನ್ ಮಷಿನ್ ಖರೀದಿಗೆ ಮಂಜೂರಾತಿ ತಂದಿಲ್ಲ. ಸಚಿವ ಹಾಲಪ್ಪ ಆಚಾರ್ ಅಭಿವೃದ್ಧಿ ಮರೆತು ರಾಜಕೀಯ ಮಾಡುತ್ತಿದ್ದಾರೆ.| ಬಸವರಾಜ ರಾಯರಡ್ಡಿ, ಮಾಜಿ ಸಚಿವಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಿಗೂ ಸಿಟಿಸ್ಕ್ಯಾನ್ ಮಷಿನ್ ಮಂಜೂರು ಮಾಡಲು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದೇವೆ. ಯಾವುದೇ ಅನುದಾನವನ್ನು ದುರುಪಯೋಗ ಆಗದಂತೆ ಅಭಿವೃದ್ಧಿ ಕಾರ್ಯಕ್ಕೆ ಬಳಸುತ್ತಿದ್ದೇವೆ. ಕಾಂಗ್ರೆಸ್‌ನವರು ಸಂಪೂರ್ಣ ಮಾಹಿತಿ ಇಲ್ಲದೆ ಮಾತನಾಡುತ್ತಾರೆ.| ಹಾಲಪ್ಪ ಆಚಾರ್, ಸಚಿವ ಯಲಬುರ್ಗಾ