ಬ್ಯಾಡಗಿ: ರಾಜ್ಯದ ಅಭಿವೃದ್ಧಿ ಹಾಗೂ ಪ್ರಗತಿಯಲ್ಲಿ ಸಮರ್ಪಕ ರಸ್ತೆಗಳ ಪಾತ್ರ ಮುಖ್ಯವಾಗಿದೆ. ಕೈಗಾರಿಕೆ, ವಾಣಿಜ್ಯ, ಆರ್ಥಿಕ ಬೆಳವಣಿಗೆ ದೃಷ್ಟಿಯಿಂದ ರಸ್ತೆ ಸಂಪರ್ಕಕ್ಕೆ ಹೆಚ್ಚು ಒತ್ತು ನೀಡಬೇಕಿದ್ದು, ಆದ್ಯತೆಯ ಮೇರೆಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಲೋಕೋಪಯೋಗಿ ಇಲಾಖೆ ವತಿಯಿಂದ 22 ಕೋಟಿ ರೂ.ವೆಚ್ಚದಲ್ಲಿ ಪಟ್ಟಣದ ಅಗಸನಹಳ್ಳಿಯಿಂದ-ಶಿಡೇನೂರ ಗ್ರಾಮದವರೆಗೆ ರಸ್ತೆ ಕಾಮಗಾರಿಗೆ ಶನಿವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ರಸ್ತೆಯು ಮೂಲಸೌಕರ್ಯಗಳಲ್ಲಿ ಒಂದಾಗಿದ್ದು, ಸಾಮಾಜಿಕ ಪ್ರಯೋಜನಗಳಿಗೆ ಬಹಳ ನಿರ್ಣಾಯಕವಾಗಿದೆ. ದೇಶ ಅಭಿವೃದ್ಧಿ ಹೊಂದುವುದು, ಉದ್ಯೋಗ, ಸಾಮಾಜಿಕ, ಆರೋಗ್ಯ ಮತ್ತು ಶಿಕ್ಷಣ ಸೇವೆ ಸೇರಿದಂತೆ ಬಡತನ ಮತ್ತು ಪ್ರತಿಕೂಲತೆ ವಿರುದ್ಧ ಹೋರಾಡಲು ರಸ್ತೆಗಳು ಪ್ರಮುಖವಾಗಿವೆ. ರಸ್ತೆಗಳ ಅಭಿವೃದ್ಧಿ ರಾಜ್ಯದ ಪ್ರಗತಿಗೆ ಮಾನದಂಡವಾಗಿದೆ. ರಾಜ್ಯದ ಮೂಲೆ ಮೂಲೆಗಳಿಗೂ ರಸ್ತೆಗಳನ್ನು ಸಂಪರ್ಕಿಸುವಲ್ಲಿ ಆದ್ಯತೆಗೆ ಅನುಗುಣವಾಗಿ ವಿಶೇಷ ಅನುದಾನ ನೀಡಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ ಬಡವರ ಪರವಾದ ಪಕ್ಷವಾಗಿದ್ದು, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜತೆಗೆ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಾಗಿದೆ. ನಮ್ಮ ಆರ್ಥಿಕ ಇತಿಮಿತಿಯಲ್ಲಿ ಅಭಿವೃದ್ಧಿ ಮಾಡಬೇಕಾಗಿದ್ದರಿಂದ ಜನರ ನಿರೀಕ್ಷೆಗೆ ತಕ್ಕಂತೆ ರಸ್ತೆಗಳ ಅಭಿವೃದ್ಧಿ ಆಗದೇ ಇರಬಹುದು. ಆದರೆ, ಅವಶ್ಯವಿರುವಲ್ಲಿ ಆದ್ಯತೆ ಮೇರೆಗೆ ಅನುದಾನ ನೀಡಲು ಈಗಲೂ ಬದ್ಧನಾಗಿದ್ದೇನೆ. ಅಭಿವೃದ್ಧಿಯಲ್ಲಿ ನಮ್ಮ ಸರ್ಕಾರ ಹಿಂದುಳಿದಿಲ್ಲ ಎಂದರು.
ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಮುಖ್ಯರಸ್ತೆ ಅಗಲೀಕರಣ ತಾಲೂಕಿನ ಜನರ ಬಹುದಿನದ ಬೇಡಿಕೆಯಾಗಿದೆ. ಎಲ್ಲರ ವಿಶ್ವಾಸ ಪಡೆದು ಕಾಮಗಾರಿ ಆರಂಭಿಸಲು ಚಿಂತನೆ ನಡೆದಿದೆ. ಈ ನಿಟ್ಟಿನಲ್ಲಿ ಎಲ್ಲ ಜನಪ್ರತಿನಿಧಿಗಳ ವಿಶ್ವಾಸ ಪಡೆದು ಅಭಿವೃದ್ಧಿಗೆ ಪ್ರಾಮಾಣಿಕ ಯತ್ನ ನಡೆಸುತ್ತಿದ್ದೇನೆ. ಬ್ಯಾಡಗಿ ಮತಕ್ಷೇತ್ರ ಮಲೆನಾಡು ಮಂಡಳಿ ವ್ಯಾಪ್ತಿಗೆ ಸೇರಿದ್ದು, ತಾಲೂಕಿನ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ ಎಂದರು.
ಇದಕ್ಕೂ ಮುನ್ನ ರಸ್ತೆ ಕಾಮಗಾರಿಗೆ ಸಚಿವ ಸತೀಶ ಜಾರಕಿಹೊಳಿ ಭೂಮಿಪೂಜೆ ನೆರವೇರಿಸಿದರು. ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಪುರಸಭೆ ಅಧ್ಯಕ್ಷ ಬಾಲಚಂದ್ರ ಪಾಟೀಲ, ಉಪಾಧ್ಯಕ್ಷ ಸುಭಾಸ ಮಾಳಗಿ, ಸವದತ್ತಿ ಶಾಸಕ ವಿಶ್ವಾಸ ವೈದ್ಯ, ಮಾಜಿ ಶಾಸಕ ಸುರೇಶಗೌಡ ಪಾಟೀಲ, ಕಾಂಗ್ರೆಸ್ ತಾಲೂಕಾಧ್ಯಕ್ಷ ದಾನಪ್ಪ ಚೂರಿ, ಶಿವನಗೌಡ ಪಾಟೀಲ, ಮುಖಂಡರಾದ ಟಿ. ಈಶ್ವರ, ಚನ್ನಬಸಪ್ಪ ಹುಲ್ಲತ್ತಿ, ಶಂಭನಗೌಡ ಪಾಟೀಲ, ಬೀರಪ್ಪ ಬಣಕಾರ, ಮುನಾಫ್ ಎರೇಶೀಮಿ, ಶಂಕರ ಕುಸಗೂರ, ನಾಗರಾಜ ಆನ್ವೇರಿ, ಖಾದರಸಾಬ್ ದೊಡ್ಮನಿ, ರಾಮಣ್ಣ ಉಕ್ಕುಂದ, ದುರ್ಗೆಶ ಗೋಣೆಮ್ಮನವರ, ಗಿರೀಶ ಇಂಡಿಮಠ, ಇಂಜಿನಿಯರ್ ಉಮೇಶ ನಾಯಕ ಇದ್ದರು.