ಜಿಲ್ಲೆ

ಹುಚ್ಚಂಗಿಪುರ ಸರ್ಕಾರಿ ಶಾಲೆಗೆ ಬೆಳಕಾದ ರವಿ

Davangere - Desk - Shobha Krishna Gowda

ಜಗಳೂರು: ಅವಜ್ಞೆಗೆ ಒಳಗಾದ ಕೆಲವು ಸರ್ಕಾರಿ ಶಾಲೆಗಳಿಗೆ ನೆರವಾಗಿ, ಆ ಶಾಲೆಗಳ ಚೆಹರೆಯನ್ನೇ ಬದಲಾಯಿಸಿದ ಮಹನೀಯರು ವಿರಳ. ಅವರ ಸಾಲಿಗೆ ಹೊಸ ಸೇರ್ಪಡೆ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರೂ ಒಬ್ಬರು. ಹುಟ್ಟೂರು ಜಗಳೂರು ತಾಲೂಕಿನ ಹುಚ್ಚಂಗಿಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದು, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಡಿ 3.5 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಿ, ಸುಸಜ್ಜಿತ ಮಾದರಿ ಶಾಲೆಯಾಗಿ ನಿರ್ವಿುಸಿ ಗಮನ ಸೆಳೆದಿದ್ದಾರೆ.

ರವಿಕುಮಾರ್, ಶಿಕ್ಷಣ ಕೇಂದ್ರಿತ ಎಬಿವಿಪಿ ಸಂಘಟನೆಯಲ್ಲಿ 25 ವರ್ಷ ಪೂರ್ಣಾವಧಿ ಕಾರ್ಯಕರ್ತರಾಗಿ, ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಬಡ-ಮಧ್ಯಮ ವರ್ಗದ ಮಕ್ಕಳಿಗೂ ಉನ್ನತ ಶಿಕ್ಷಣ ಸಿಗಬೇಕು. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಕಾಳಜಿಯೊಂದಿಗೆ, ಎಂಎಲ್ಸಿ ಆದ ನಂತರದಲ್ಲೂ ಸದನದ ಒಳ-ಹೊರಗೆ ಹೋರಾಟ ಮಾಡುತ್ತಿದ್ದಾರೆ.

ಸರ್ಕಾರಿ ಶಾಲಾ-ಕಾಲೇಜುಗಳು ಮೂಲ ಸೌಕರ್ಯ ಹಾಗೂ ಶಿಕ್ಷಕರ ಕೊರತೆಯಿಂದ ಸೊರಗುತ್ತಿರುವ ಹಿನ್ನೆಲೆಯಲ್ಲಿ ಹಳ್ಳಿಯ ಮಕ್ಕಳು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವ ಹೊತ್ತಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ರವಿಕುಮಾರ್ ದೃಢ ಸಂಕಲ್ಪ ಮಾಡಿದರು. ಚೊಚ್ಚಲ ಪ್ರಯತ್ನವಾಗಿ ಹುಚ್ಚಂಗಿಪುರದ ಸರ್ಕಾರಿ ಶಾಲೆಯನ್ನು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಷ್ಟರ ಮಟ್ಟಿಗೆ ನಿರ್ವಿುಸಿದ್ದಾರೆ.

20 ಸಾವಿರ ಚ.ಅಡಿಯಲ್ಲಿ ನಿರ್ವಿುಸಲಾದ ಶಾಲೆಯಲ್ಲಿ 16 ಕೊಠಡಿಗಳಿವೆ. ಹೊರಾಂಗಣ ಕಾರ್ಯಕ್ರಮಗಳಿಗೆ ಕುವೆಂಪು ಬಯಲು ರಂಗ ಮಂದಿರ, ಒಳಾಂಗಣ ಕಾರ್ಯಕ್ರಮಗಳಿಗೆ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣ, ಸ್ವಾಮಿ ವಿವೇಕಾನಂದರ ಸ್ಮಾರ್ಟ್ ಕ್ಲಾಸ್ ಇದೆ. ಬೋರ್​ವೆಲ್ ಕೊರೆಸಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ದಾವಣಗೆರೆ ಜಿಲ್ಲಾ ಕೇಂದ್ರದಿಂದ 45 ಕಿ.ಮೀ ದೂರದ ಈ ಕುಗ್ರಾಮದ ಈ ಸರ್ಕಾರಿ ಶಾಲೆಯನ್ನು ಶುಕ್ರವಾರ ಬೆಳಗ್ಗೆ 9-30ಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸುವರು. ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ, ಎಂಎಲ್ಸಿಗಳಾದ ಎಸ್.ವಿ. ಸಂಕನೂರು, ಕೆ.ಎಸ್. ನವೀನ್, ಚಿದಾನಂದಗೌಡ, ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಮಾಜಿ ಶಾಸಕ ಎಸ್.ವಿ. ರಾಮಚಂದ್ರಪ್ಪ ಇತರರು ಭಾಗವಹಿಸಲಿದ್ದಾರೆ.

ಸಮಾಜದಲ್ಲಿ ಶಿಕ್ಷಣ ಪ್ರಮುಖವಾದುದು. ಶಿಕ್ಷಣದ ಹೋರಾಟದಿಂದಲೇ ನಾನು ವಿಧಾನ ಪರಿಷತ್ ಸದಸ್ಯನಾಗಿದ್ದು, ಇಡೀ ರಾಜ್ಯ ನನ್ನನ್ನು ಗುರುತಿಸುತ್ತಿದೆ. ಹಾಗಾಗಿ ಹುಟ್ಟೂರಲ್ಲಿ ಮಕ್ಕಳ ಕಲಿಕೆಗೆ ಅನುಕೂಲವಾಗುವ ಉದ್ದೇಶದಿಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುದಾನ ಬಿಡುಗಡೆಗೊಳಿಸಿ, ಶಾಲೆ ನಿರ್ವಿುಸಲಾಗಿದೆ. | ರವಿಕುಮಾರ್, ಎಂಎಲ್​ಸಿ