ನಾಯಕನಹಟ್ಟಿ: ಜಿಲ್ಲಾ ಕೇಂದ್ರದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಅಗತ್ಯವಾದ ಅನುದಾನ ಒದಗಿಸಿಕೊಡುವುದಾಗಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಭರವಸೆ ನೀಡಿದರು.
ನಾಯಕನಹಟ್ಟಿ ಸಮೀಪದ ತಳಕು ಹೋಬಳಿಯ ಹೊಸಹಳ್ಳಿಯಲ್ಲಿ ಗುರುವಾರ ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡಿದರು.
ನೆರೆಯ ಜಿಲ್ಲೆಗಳಲ್ಲಿ ಕನ್ನಡ ಭವನಗಳಿವೆ. ಆದರೆ, ಜಿಲ್ಲಾ ಕೇಂದ್ರದಲ್ಲಿ ಕನ್ನಡ ಭವನವಿಲ್ಲ. ಈ ಬಗ್ಗೆ ಮುಂದಿನ ಜಿಲ್ಲಾ ಸಭೆಗಳಲ್ಲಿ ಚರ್ಚೆ ನಡೆಸಲಾಗುವುದು. ಎಲ್ಲ ಶಾಸಕರು ಮತ್ತು ಸಚಿವರ ಜತೆಗೆ ಚರ್ಚಿಸಿ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ಚಿತ್ರದುರ್ಗ ನಗರದ ಪಿಳ್ಳೇಕೇರನಹಳ್ಳಿಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಕಸಾಪ ಹೆಸರಿನಲ್ಲಿ ನಿವೇಶನವಿದೆ. ಜಿಲ್ಲಾಧಿಕಾರಿಗಳು ಹಾಗೂ ಕಸಾಪ ಜಿಲ್ಲಾಧ್ಯಕ್ಷರ ಜಂಟಿ ಖಾತೆಯಲ್ಲಿ 20 ಲಕ್ಷ ರೂ. ಹಣವಿದೆ. ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ ಕನ್ನಡ ಭವನದ ಉದ್ದೇಶವನ್ನು ಕಸಾಪ ಹೊಂದಿದೆ. ಸರ್ಕಾರದ ನಿಧಿ, ಸಂಸದರು, ಶಾಸಕರು ಅನುದಾನ ನೀಡಿದರೆ ನಿರ್ಮಾಣ ಕಾರ್ಯ ಕೈಗೊಳ್ಳಲು ಅನುಕೂಲ ಆಗಲಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ, ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಎಂ.ವೈ.ಟಿ.ಸ್ವಾಮಿ, ಮುಖಂಡ ಶಿವಣ್ಣ ಮತ್ತಿತರರಿದ್ದರು.