ಹಾಸನ: ದೇವಾನು ದೆವತೆಗಳಿಗೆ ಆಯುಧ, ರಥಗಳನ್ನು ಮಾಡಿಕೊಟ್ಟಿದ್ದು ವಿಶ್ವಕರ್ಮ ಸಮಾಜ. ಹಾಗಾಗಿ ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದು ಸಂಸದ ಶ್ರೇಯಸ್ ಎಂ.ಪಟೇಲ್ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೊಗದಲ್ಲಿ ಬುಧವಾರ ಇಲ್ಲಿನ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು, ವಿಶ್ವಕರ್ಮರನ್ನು ದೇವರಿಗೆ ಹೋಲಿಸುವ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸ್ವರೂಪ್ ಪ್ರಕಾಶ್, ಸಮುದಾಯದ ಮಕ್ಕಳಿಗೆ ಅನುಕೂಲ ಕಲ್ಪಿಸಲು ವಸತಿ ನಿಲಯ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ 25 ಲಕ್ಷ ರೂ. ಅನುದಾನ ನೀಡಲಾಗುವುದು. ಈಗಾಗಲೇ ಜಕಣಾಚಾರಿ ವೃತ್ತ ಎಂದು ಸರ್ಕಲ್‌ಗೆ ಹೆಸರನ್ನು ಇಡಲಾಗಿದ್ದು. ಮುಂದಿನ ದಿನಗಳಲ್ಲಿ ಅವರ ಪ್ರತಿಮೆಯನ್ನು ಮಾಡಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾಧಿಕಾರಿ ಲತಾ ಕುಮಾರಿ ಮಾತನಾಡಿ, ಜಗತ್ತಿಗೆ ರೂಪಕೊಟ್ಟಿದ್ದು ವಿಶ್ವಕರ್ಮ ಸಮುದಾಯ. ಇಂದು ಜಗತ್ತನ್ನು ಸುಂದರೀಕರಣ ಮಾಡುವ ದೈವಿಕಲೆ ಹೊಂದಿರುವ ಮಹಾನುಭಾವರ ಹೆಸರಿನಲ್ಲಿ ವಿಶ್ವಕರ್ಮ ಜಯಂತಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ವಿಶ್ವಕರ್ಮರು ಮಡುವ ಕೆಲಸ ಶ್ರೇಷ್ಠ ಹಾಗೂ ವಿಶೇಷವಾದದ್ದು. ಹಾಗಾಗಿ ನಾವೆಲ್ಲರೂ ಅಂತಃಕರಣವನ್ನು ಶುದ್ಧಿ ಮಾಡಿಕೊಂಡು ಮಹನೀಯರ ದಾರಿಯಲ್ಲಿ ನಡೆಯಬೇಕಿದೆ ಎಂದು ಶ್ರೀ ಶಿವಚಂದ್ರಶೇಖರ ಸ್ವಾಮೀಜಿ ಹೇಳಿದರು.
ಶ್ರೀ ಕ್ಷೇತ್ರ ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕರ್ಮ ಎಂದರೆ ಕೆಲಸ. ಹಾಗಾಗಿ ವಿಶ್ವದ ಕೆಲಸ ಮಾಡುತ್ತಿರುವುದು ವಿಶ್ವಕರ್ಮ ಸಮುದಾಯ ಎಂದರು.
ವಿಶ್ವಕರ್ಮ ಸಮಾಜದವರು ಮಾಡಿರುವ ಕೆಲಸಗಳು ಇಂದಿಗೂ ಜೀವಂತವಾಗಿವೆ. ವಿಶ್ವ ನೋಡುತ್ತಿರುವ ಹಳೇಬೀಡು, ಬೇಲೂರಿನ ಶಿಲ್ಪ ಕಲೆ, ದೇವಾಲಯವನ್ನು ನಿರ್ಮಿಸಿದ ಜಕಣಾಚಾರಿ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಕೃಷ್ಣೇಗೌಡ ಮಾತನಾಡಿ ಮಹಾಭಾರತ, ಪೌರಾಣಿಕ ಕಾಲದಿಂದಲೂ ಎಲ್ಲ ಮಠಗಳಿಗೆ ಶಿಲ್ಪಗಳನ್ನು ಕೆತ್ತನೆ ಮಾಡಿಕೊಟ್ಟವರು ವಿಶ್ವಕರ್ಮ ಸಮಾಜದವರು ಎಂದರು.
ಉಡುಪಿ ಜಿಲ್ಲೆಯ ಬಾರ್ಕೂರಿನ ವಾಗ್ಮಿ ಎನ್.ಆರ್.ದಾಮೋದರ ಶರ್ಮ ಮಾತನಾಡಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೆಶ್ ನಾಯ್ಡು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕ ಡಾ.ಎಚ್.ಪಿ.ತಾರಾನಾಥ್ ಇತರರಿದ್ದರು.