ಸಿದ್ದಾಪುರ: ನಾನು ನಾಲ್ಕು ಮುಖ್ಯಮಂತ್ರಿಗಳ ಅವಧಿಯಲ್ಲಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ಕ್ಷೇತ್ರಕ್ಕೆ ನೂರಾರು ಕೋಟಿ ರೂಪಾಯಿ ಅನುದಾನ ತಂದಿದ್ದೇನೆ. ಇದು ತಪ್ಪು ಹೇಗಾಗುತ್ತದೆ. ಇದನ್ನು ಮುಖ್ಯಮಂತ್ರಿಗಳ ಹಸ್ತಕ್ಷೇಪ ಎಂದು ತಿಳಿಯಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಪಟ್ಟಣದ ಕೊಂಡ್ಲಿ ಶ್ರೀ ಮಾರಿಕಾಂಬಾದೇವಿಯ ಜಾತ್ರಾ ಮಹೋತ್ಸವದಲ್ಲಿ ಶ್ರೀ ದೇವಿಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸಚಿವ ಈಶ್ವರಪ್ಪ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಮಕಾಲೀನರು. ಯಾವುದೇ ಸಮಸ್ಯೆ ಇದ್ದರೂ ಪರಸ್ಪರ ಬಗೆಹರಿಸಿಕೊಳ್ಳಬೇಕಿತ್ತು. ರಾಜ್ಯಪಾಲರಿಗೆ ದೂರು ಕೊಡುವುದು ತಪ್ಪು. ಈಶ್ವರಪ್ಪ ಅವರ ವಿರುದ್ಧ ಸಹಿ ಸಂಗ್ರಹ ಮಾಡುತ್ತಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ ಎಂದರು.
ಕೋವಿಡ್ ಎರಡನೇ ಅಲೆ ಹಬ್ಬುತ್ತಿರುವುದರಿಂದ ಸರ್ಕಾರ ಕಠಿಣ ನಿಯಮ ಜಾರಿಗೆ ತರುತ್ತಿದೆೆ. ಇದನ್ನು ಪಾಲಿಸುವುದು ಜನರು, ಜನಪ್ರತಿನಿಧಿಗಳು, ಅಧಿಕಾರಿಗಳ ಕರ್ತವ್ಯವೂ ಹೌದು. ಧಾರ್ವಿುಕ ಆಚರಣೆಗೆ ಸರ್ಕಾರ ಅಡ್ಡಿಪಡಿಸುತ್ತಿಲ್ಲ. ಸರ್ಕಾರದ ನಿಯಮ ಅನುಸರಿಸಬೇಕು ಎಂದರು. ಜಾತ್ರಾ ಸಮಿತಿ ಅಧ್ಯಕ್ಷ ಕೆ.ಜಿ. ನಾಯ್ಕ ಹಣಜೀಬೈಲ್, ಮೊಕ್ತೇಸರ ರಮೆಶ ರಾಯ್ಕರ, ಜಿಪಂ ಸದಸ್ಯ ನಾಗರಾಜ ನಾಯ್ಕ ಬೇಡ್ಕಣಿ,ಪಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಉಪಾಧ್ಯಕ್ಷ ರವಿಕುಮಾರ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ವಿನಯ ಹೊನ್ನೆಗುಂಡಿ ಇತರರಿದ್ದರು.