ಜಿಲ್ಲೆ

ಗ್ರಾನೈಟ್​ ಬಿದ್ದು ಇಬ್ಬರು ಕಾರ್ಮಿಕರ ಮೃತ್ಯು

ಉಡುಪಿ: ಮಲ್ಪೆಯ ತೊಟ್ಟಂನಲ್ಲಿ ಲಾರಿಯಿಂದ ಇಳಿಸುತ್ತಿದ್ದ ಗ್ರಾನೈಟ್​ ಮೈಮೇಲೆ ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.

ಒರಿಸ್ಸಾ ಮೂಲದ ಬಾಬುಲ್ಲ (38) ಹಾಗೂ ಭಾಸ್ಕರ್​ (40) ಮೃತರು. ಗುರುವಾರ ತೊಟ್ಟಂನಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಮನೆಗೆ ಮಂಗಳೂರಿನಿಂದ ಕಂಟೈನರ್​ ಲಾರಿಯಲ್ಲಿ ಗ್ರಾನೈಟ್​ ತರಲಾಗಿತ್ತು. ಕಂಟೇನರ್​ ಲಾರಿಯಲ್ಲಿದ್ದ ಗ್ರಾನೈಟ್​ಗಳನ್ನು ಕಟ್ಟಡ ನಿರ್ಮಾಣ ಸ್ಥಳದಲ್ಲಿದ್ದ ಕಾರ್ಮಿಕರು ಇಳಿಸಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಗ್ರಾನೈಟ್​ ಬಿದ್ದು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮಲ್ಪೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಜೀವ ರಕ್ಷಕ ಈಶ್ವರ್​ ಮಲ್ಪೆ ತಂಡದವರು ಮೃತದೇಹವನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಪರಿಹಾರಕ್ಕೆ ಆಗ್ರಹ
ಮಲ್ಪೆ ಬಳಿಯ ತೊಟ್ಟಂನಲ್ಲಿ ಮನೆ ನಿಮಾರ್ಣಕ್ಕೆ ಕಂಟೈನರ್​ ಲಾರಿಯಿಂದ ಗ್ರಾನೈಟ್​ ಇಳಿಸುತ್ತಿದ್ದಾಗ ಒರಿಸ್ಸಾ ಮೂಲದ ಯುವ ಕಾರ್ಮಿಕರಿಬ್ಬರು ದಾರುಣವಾಗಿ ಸಾವನ್ನಪ್ಪಿದ್ದು, ಕಾರ್ಮಿಕರು ಕೆಲಸ ಮಾಡುವಾಗ ಸಂಬಂಧಪಟ್ಟವರು ಯಾವುದೇ ಸುರಕ್ಷತೆ ಒದಗಿಸದೇ ಇರುವುದರಿಂದ ಅಮಾಯಕ ಜೀವಗಳು ಬಲಿಯಾಗುತ್ತಿವೆ. ಜೀವ ಹಾನಿಗೆ ಕಾರಣರಾದ ಗ್ರಾನೈಟ್​ ಸಂಸ್ಥೆಯ ಮಾಲೀಕರು ಮೇಲೆ ಕಠಿಣ ಕ್ರಮ ಕೈಗೊಂಡು ಯುವ ಕಾರ್ಮಿಕರ ಕುಟುಂಬಗಳಿಗೆ ತಲಾ ರೂ. 10 ಲಕ್ಷ ಪರಿಹಾರ ನೀಡಬೇಕು ಎಂದು ಸೆಂಟರ್​ ಆಫ್​ ಇಂಡಿಯನ್​ ಟ್ರೇಡ್​ ಯೂನಿಯನ್ಸ್​ (ಸಿಐಟಿಯು) ಜಿಲ್ಲಾ ಸಮಿತಿ ಆಗ್ರಹಿಸಿದೆ.