ಕಮಲಾಪುರ: ಮುಖ್ಯ ರಸ್ತೆಗಳಲ್ಲಿ ರಾರಾಜಿಸಿದ ಕನ್ನಡ ಧ್ವಜಗಳು, ಎಲ್ಲೆಡೆ ಮೊಳಗಿದ ಜೈ ಕರ್ನಾಟಕ ಮಾತೆ, ನಮೋ ಕನ್ನಡಾಂಬೆ ಜೈಘೋಷ, ಕನ್ನಡ ಹಾಡುಗಳಿಗೆ ಹುಚ್ಚೆದು ಕುಣಿದ ಅಭಿಮಾನಿಗಳು.. ಇದು ಕರ್ನಾಟಕ ಸಂಭ್ರಮ-೫೦ರ ಜ್ಯೋತಿ ರಥಯಾತ್ರೆಯಲ್ಲಿ ಕಂಡು ಬಂದ ದೃಶ್ಯ.
ವಿ.ಕೆ.ಸಲಗರ ಗ್ರಾಮದ ಮೂಲಕ ಕೆಂಬಾಳೆ ನಾಡಿಗೆ ಕನ್ನಡ ಜ್ಯೋತಿ ರಥಯಾತ್ರೆ ಆಗಮಿಸಿತು. ತಹಸೀಲ್ದಾರ್ ಮುಹಮ್ಮದ್ ಮೋಸಿನ್ ಅವರು ಕನ್ನಡಾಂಬೆಗೆ ಪೂಜೆ ಸಲ್ಲಿಸಿ ಯಾತ್ರೆಯನ್ನು ಸಂಭ್ರಮದಿಂದ ಬರಮಾಡಿಕೊಂಡರು. ಕಮಲಾಪುರದ ಶ್ರೀ ಬಸವೇಶ್ವರ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ಕನ್ನಡಭಿಮಾನಿಗಳು ಸೇರಿಕೊಂಡರು. ಬಸ್ ನಿಲ್ದಾಣ, ಡಾ.ಅಂಬೇಡ್ಕರ್ ಸೇರಿ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು.
ಅಧಿಕಾರಿಗಳು, ಕನ್ನಡ ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳು, ಸುತ್ತಮುತ್ತಲಿನ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಅಸಂಖ್ಯಾತ ಕನ್ನಡಭಿಮಾನಿಗಳು ಕೈಯಲ್ಲಿ ಧ್ವಜ ಹಿಡಿದು ಜೋಶ್‌ನಿಂದ ಹೆಜ್ಜೆ ಹಾಕಿದರು. ಮೆರವಣಿಗೆಯಲ್ಲಿ ಕೋಲಾಟ, ಲೇಜಿಮ್, ನೃತ್ಯ ಗಮನಸೆಳೆಯಿತು.
ತಾಪಂ ಇಒ ಅಂಬರೀಶ ಪಾಟೀಲ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಾಂತಪ್ಪ ಹಾದಿಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಹಂಚಿನಾಳ, ಎಡಿ ಜಗನ್ನಾಥ ರೆಡ್ಡಿ, ಮಹಾಗಾಂವ್ ಗ್ರಾಪಂ ಅಧ್ಯಕ್ಷೆ ಮನೀಷಾ ಹರಸೂರಕರ್, ಕಸಾಪ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ, ಪ್ರಮುಖರಾದ ಸಂತೋಷ ರಾಂಪುರೆ, ರಘುನಂದನ ದ್ಯಾಮಣಿ, ಮಂಜುನಾಥ ಬಿರಾದಾರ, ನಂದನಕುಮಾರ ಹರಸೂರ, ಬಾಬು ಜಾಲಳ್ಳಿ, ಸಂಗಪ್ಪ ಮರಕುಂದಿ, ರವೀಂದ್ರ ಬಿಕೆ, ಅಂಬಿಕಾ ಉಪ್ಪಿನ, ರಾಗಿಣಿ ಇತರರಿದ್ದರು. ಸಲಗರ, ಮುಗಳಿ, ಮಡಕಿ ತಾಂಡಾ, ಮಹಾಗಾಂವ್, ಕಮಲಾಪುರ, ಮಹಾಗಾಂವ್ ಕ್ರಾಸ್‌ಗಳಲ್ಲಿ ಸಂಚರಿಸಿದ ಬಳಿಕ ಕಲಬುರಗಿ ತಾಲೂಕಿಗೆ ರಥಯಾತ್ರೆ ತೆರಳಿತು.
ಕನ್ನಡದ ಹಾಡಿಗೆ ಸಕ್ಕತ್ ಸ್ಟೆಪ್ಕ: ಮಲಾಪುರದಲ್ಲಿ ಕನ್ನಡ ಜ್ಯೋತಿ ರಥಯಾತ್ರೆಯ ಮೆರವಣಿಗೆಯಲ್ಲಿ ತಹಸೀಲ್ದಾರ್ ಮಹಮ್ಮದ್ ಮೋಸಿನ್, ಕಸಾಪ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು `ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಹಾಡಿಗೆ ಭರ್ಜರಿ ಹೆಜ್ಜೆ ಹಾಕಿ ಗಮನಸೆಳೆದರು. ಎಲ್ಲರೂ ಕೈಯಲ್ಲಿ ಕನ್ನಡ ಧ್ವಜ ಹಿಡಿದು ಕುಣಿದು ಸಂಭ್ರಮಿಸಿದರು.
ಮೈಸೂರು ರಾಜ್ಯ ಕರ್ನಾಟಕ ಎಂದು ಮರು ನಾಮಕರಣಗೊಂಡು ಐವತ್ತು ವರ್ಷಗಳಾಗಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ವರ್ಷಪೂರ್ತಿ ಕನ್ನಡಮ್ಮನ ಜಾತ್ರೆ ನಡೆಸುವುದಕ್ಕಾಗಿ `ಕನ್ನಡ ಜ್ಯೋತಿ ರಥಯಾತ್ರೆ' ಆಯೋಜಿಸಿದೆ.
| ಮಹಮ್ಮದ್ ಮೋಸಿನ್, ತಹಸೀಲ್ದಾರ್