ಜಿಲ್ಲೆ

ವಿಜಯವಾಣಿ ಶಿಕ್ಷಣ ಮೇಳಕ್ಕೆ ಚಾಲನೆ: ಸಹಸ್ರಾರು ವಿದ್ಯಾರ್ಥಿಗಳು ಭೇಟಿ

ಕಲಬುರಗಿ: ವಿಜಯವಾಣಿ ಹಾಗೂ ಬೀದರ್ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಸಹಯೋಗದಲ್ಲಿ ನಗರದಲ್ಲಿ ಮಂಗಳವಾರ ನಡೆಯುತ್ತಿರುವ ಶೈಕ್ಷಣಿಕ ಶಿಕ್ಷಣ ಸಮ್ಮೇಳನಕ್ಕೆ ವಿದ್ಯಾರ್ಥಿಗಳ ದಂಡೆ ಹರಿದು ಬರುತ್ತಿದ್ದು, ಶೈಕ್ಷಣಿಕ ಸಮ್ಮಿಲನವೇ ಶುರುವಾಗಿದೆ.

ಭಾಲ್ಕಿಯ ಶ್ರೀ ಗುರುಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯದಲ್ಲಿ ಬೆಳಗ್ಗೆ ಸಚಿವ ಡಾ.ಶರಣಬಸವಪ್ಪ ಪಾಟೀಲ್ ಮೇಳಕ್ಕೆ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ.ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.

ಹೈದರಾಬಾದ್ ಕರ್ನಾಟಕ ಸೇರಿ ಕರ್ನಾಟಕದ ರಾಜ್ಯದ ವಿವಿಧೆಡೆಯ 30ಕ್ಕಿಂತ ಹೆಚ್ಚು ಶಿಕ್ಷಣ ಸಂಸ್ಥೆಗಳು ಮೇಳದಲ್ಲಿ ಭಾಗವಹಿಸಿದ್ದು, ಶಿಕ್ಷಣ ಸಂಸ್ಥೆಗಳಲ್ಲಿ ದೊರೆಯುವ ವಿಭಿನ್ನವಾದ ಕೋರ್ಸ್ ಮಾಹಿತಿ, ಪ್ರವೇಶ ಪ್ರಕ್ರಿಯೆ ಕುರಿತು ವಿವರವಾಗಿ ವಿವರಣೆ ನೀಡುತ್ತಿದ್ದು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆದಿದೆ.

ಅಗಸ್ಥ್ಯ ಫೌಂಡೇಶನ್ ನಿಂದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಂದಲೇ ವಿಜ್ಞಾನ ವಸ್ತು ಪ್ರದರ್ಶನ ಆರಂಭವಾಗಿದೆ.

ಕಾರ್ಯಕ್ರಮದ ಮೊದಲನೇ ಗೋಷ್ಠಿಯಲ್ಲಿ ಶಿಕ್ಷಣ ಇಲಾಖೆ ಅಪರ ಆಯುಕ್ತ ಆಕಾಶ ಎಸ್. ಅವರು ಉಪನ್ಯಾಸ ನೀಡಿ, ಸಂವಾದ ನಡೆಸುತ್ತಿದ್ದು ವಿದ್ಯಾರ್ಥಿಗಳ ಕೇಳುವ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರವನ್ನು ನೀಡಿ ಅವರ ಜ್ಞಾನದ ದಾಹವನ್ನು ನೀಗಿಸುವ ಕೆಲಸವನ್ನು ಮಾಡಿದರು.

ಸಾವಿರಾರು ವಿದ್ಯಾರ್ಥಿಗಳು ಬೆಳಗ್ಗೆಯಿಂದಲೇ ಭೇಟಿ ನೀಡುತ್ತಿದ್ದು, ಶೈಕ್ಷಣಿಕ ಸಲಹೆ ಪಡೆಯುತ್ತಿದ್ದಾರೆ. ಶಿಕ್ಷಣ ಮೇಳ ಬುಧವಾರವರೆಗೂ ಮುಂದುವರಿಯಲಿದ್ದು, ಮಂಗಳವಾರ ಸಂಜೆ ಖ್ಯಾತ ಸ್ಟ್ಯಾಂಡಪ್ ಕಾಮಿಡಿಯನ್ ಕಾರ್ತಿಕ್ ಪತ್ತಾರ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಈ ಭಾಗದ ಖ್ಯಾತ ಶಿಕ್ಷಣ ತಜ್ಞರು ಅನುಭವಿಗಳು, ನಿರಂತರವಾಗಿ ಉಪನ್ಯಾಸ ಘೋಷ್ಠಿಗಳಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಸಲಹೆ ನೀಡುತ್ತಿದ್ದಾರೆ.