ಜಿಲ್ಲೆ

ಗಜೇಂದ್ರಗಡದಲ್ಲಿ ನುಡಿ ತೇರಿನ ಸಡಗರ, ಸಮ್ಮೇಳನಾಧ್ಯಕ್ಷರ ಅದ್ದೂರಿ ಮೆರವಣಿಗೆ

ಗಜೇಂದ್ರಗಡ: ಭಾವೈಕ್ಯಕ್ಕೆ ಹೆಸರಾಗಿರುವ ಗಜೇಂದ್ರಗಡದಲ್ಲಿ ಜರುಗುತ್ತಿರುವ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಸಾರೋಟಿನಲ್ಲಿ ತಾಯಿ ಭುವನೇಶ್ವರಿ ಹಾಗೂ ಸಮ್ಮೇಳನಾಧ್ಯಕ್ಷ ಪ್ರೊ.ಚಂದ್ರಶೇಖರ ವಸ್ತ್ರದ ಅವರ ಮೆರವಣಿಗೆಗೆ ಸೋಮವಾರ ಇಲ್ಲಿನ ಮೈಸೂರು ಮಠದ ಮುಂಭಾಗ ವಿವಿಧ ಕಲಾತಂಡಗಳು, ಛದ್ಮವೇಷ ಧರಿಸಿದ್ದ ಶಾಲಾ ಮಕ್ಕಳ ಹಾಗೂ ವಿವಿಧ ಸಂಘಟನೆಗಳ ಸಮ್ಮುಖದಲ್ಲಿ ಅದ್ದೂರಿ ಚಾಲನೆ ನೀಡಲಾಯಿತು. ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ ಮೆರವಣಿಗೆಗೆ ಚಾಲನೆ ನೀಡಿದರು.

ಪಟ್ಟಣದ ಮೈಸೂರು ಮಠದಿಂದ ಆರಂಭವಾದ ಮೆರವಣಿಗೆ ಬಸವೇಶ್ವರ ವೃತ್ತ, ದುರ್ಗಾ ವೃತ್ತ, ಜೋಡು ರಸ್ತೆ, ಕಾಲಕಾಲೇಶ್ವರ ವೃತ್ತ, ರೋಣ ರಸ್ತೆ ಮೂಲಕ ಜಗದ್ಗುರು ತೋಂಟದಾರ್ಯ ಸಿಬಿಎಸ್‌ಇ ಶಾಲೆ ಆವರಣದ ಮುಖ್ಯ ವೇದಿಕೆಗೆ ತಲುಪಿತು. ಸೂಡಿ ಗ್ರಾಮದ ಚಂಡೆ ವಾದ್ಯ, ನರಗುಂದದ ಜಗ್ಗಲಗಿ, ಕೊಣ್ಣೂರಿನ ಗಾರುಡಿ ಗೊಂಬೆ, ದರೋಜಿಯ ಹಗಲುವೇಷ, ಗಜೇಂದ್ರಗಡದ ಲಂಬಾಣಿ ನೃತ್ಯ, ಇಟಗಿ ಗ್ರಾಮದ ವೀರಭದ್ರೇಶ್ವರ ಕರಡಿಮಜಲು, ಡೊಳ್ಳು ಕುಣಿತ, ಹಲಗೆ ಮೇಳ, ಗಜೇಂದ್ರಗಡದ ವೀರಗಾಸೆ ಕಲಾ ತಂಡಗಳು ರಂಗು ತುಂಬಿದರೆ, ಸ್ವಾತಂತ್ರೃ ಹೋರಾಟಗಾರರು, ಬಸವಾದಿ ಶರಣರ ಛದ್ಮವೇಷ ಧರಿಸಿದ್ದ ಶಾಲಾ ಮಕ್ಕಳ ಮೆರವಣಿಗೆಗೆ ಮೆರುಗು ನೀಡಿದರು. ವಿದ್ಯಾರ್ಥಿಗಳು ಕನ್ನಡ ಬಾವುಟ ಹಿಡಿದು ಶಿಸ್ತಿನಿಂದ ಸಾಲಾಗಿ ಸಾಗಿದರು. ಮೆರವಣಿಗೆಯಲ್ಲಿ ಶಾಸಕರು, ಮುಖಂಡರು ಕಲಾತಂಡಗಳ ವಾದ್ಯಗಳನ್ನು ನುಡಿಸುವುದರ ಜತೆಗೆ ನೃತ್ಯ ಮಾಡಿದರು.

ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಕಸಾಪ ತಾಲೂಕು ಘಟಕದ ಅಧ್ಯಕ್ಷ ಅಮರೇಶ ಗಾಣಿಗೇರ, ಪುರಸಭೆ ಉಪಾಧ್ಯಕ್ಷೆ ಸವಿತಾ ಬಿದರಳ್ಳಿ, ಸ್ಥಾಯಿ ಸಮಿತಿ ಚೇರ್ಮನ್ ಮುದಿಯಪ್ಪ ಮುಧೋಳ, ಮುಖ್ಯಾಧಿಕಾರ ಬಸವರಾಜ ಬಳಗಾನೂರ, ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ಮುಖಂಡರಾದ ಸಿದ್ದಣ್ಣ ಬಂಡಿ, ಮಿಥುನ್ ಪಾಟೀಲ, ಅಪ್ಪು ಮತ್ತಿಕಟ್ಟಿ, ಎಚ್.ಎಸ್. ಸೋಂಪೂರ, ರಾಜು ಸಾಂಗ್ಲೀಕರ, ಡಾ.ಎಂ.ಎ. ಹಾದಿಮನಿ, ವಿ.ಎ. ಹಾದಿಮನಿ, ಆರ್.ಎಂ. ರಾಯಬಾಗಿ, ಶ್ರೀಧರ ಬಿದರಳ್ಳಿ, ಬಸವರಾಜ ಚನ್ನಿ, ಬಸವರಾಜ ಹೂಗಾರ, ರಾಜಶೇಖರ ಹೊಸಂಗಡಿ, ಶರಣಪ್ಪ ಪೂಜಾರ, ರವಿ ಗಡೇದವರ, ಮಂಜುಳಾ ರೇವಡಿ, ಸುಮಂಗಲಾ ಇಟಗಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.