ಜಿಲ್ಲೆ

ಯಲ್ಲಾಪುರದಲ್ಲಿ ಭವ್ಯ ಶೋಭಾಯಾತ್ರೆ

ಬಸವರಾಜ ವೀರಪ್ಪ ಗರಗ

ಯಲ್ಲಾಪುರ: ಯುಗಾದಿ ಹಬ್ಬದ ಪ್ರಯುಕ್ತ ಯುಗಾದಿ ಉತ್ಸವ ಸಮಿತಿಯ ಬೆಳ್ಳಿಹಬ್ಬ ಭವ್ಯ ಶೋಭಾಯಾತ್ರೆ ಭಾನುವಾರ ನಡೆಯಿತು.

ಪಟ್ಟಣದ ಕೋಟೆಕರಿಯವ್ವ ದೇವಸ್ಥಾನದ ಆವಾರದಿಂದ ಆರಂಭಗೊಂಡ ಶೋಭಾಯಾತ್ರೆ, ಗಾಂಧಿ ಸರ್ಕಲ್, ಶಿವಾಜಿಸರ್ಕಲ್,ನೂತನನಗರ ಜಡ್ಡಿ, ಅಂಬೇಡ್ಕರ್ ಸರ್ಕಲ್ ಡಿಟಿ ರಸ್ತೆ ಮೂಲಕ ತೆರಳಿ ದೇವಿ ದೇವಸ್ಥಾನಕ್ಕೆ ತೆರಳುವುದರೊಂದಿಗೆ ಸಂಪನ್ನಗೊಂಡಿತು.

ಶಿವಾಜಿ, ಕಾಳಿ, ಕರಡಿ, ಸ್ಪೈಡರ್​ವ್ಯಾನ್ ಸೇರಿ ವಿವಿಧ ಆಕರ್ಷಕ ಟ್ಯಾಬ್ಲೋ, ಚಂಡೆವಾದ್ಯ, ಬೊಂಬೆ ಕುಣಿತ, ಝಾಂಜ್, ಪತಾಕೆ ಮೆರವಣಿಗೆಯ ಶೋಭೆ ಹೆಚ್ಚಿಸಿದವು. ವಾದ್ಯಗಳ ಸಂಗೀತಕ್ಕೆ ಸಾವಿರಾರು ಜನ ಹೆಜ್ಜೆ ಹಾಕಿದರು. ಶಾಸಕ ಶಿವರಾಮ ಹೆಬ್ಬಾರ ಯುವಕರೊಂದಿಗೆ ಹಾಡಿಗೆ ಹೆಜ್ಜೆ ಹಾಕಿ ಮೆರವಣಿಗೆಯಲ್ಲಿ ಗಮನ ಸೆಳೆದರು. ಗ್ರಾಮದೇವಿ ದೇವಸ್ಥಾನದ ಆವಾರದಲ್ಲಿ ನೂತನ ವಿಶ್ವಾವಸು ಸಂವತ್ಸರದ ಪಂಚಾಂಗವನ್ನು ಜ್ಯೋತಿಷಿ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಪಠಿಸಿದರು.

ಡಿಜೆ ಬಳಕೆಗೆ ಕಡಿವಾಣ, ವಿರೋಧದ ಚರ್ಚೆ: ಶೋಭಾಯಾತ್ರೆಯಲ್ಲಿ ಡಿಜೆ ಬಳಸದೇ ಕೇವಲ ಭಾರತೀಯ ಸಂಪ್ರದಾಯದ ವಾದ್ಯಗಳನ್ನು ಮಾತ್ರ ಬಳಸಿ ಸಮಿತಿ ಮಾದರಿಯಾಯಿತು. ಡಿಜೆ ಬಳಸದೇ ಇರುವ ಬಗ್ಗೆ ಡಿಜೆ ಪ್ರಿಯರಲ್ಲಿ ಅಸಮಾಧಾನ ಜೋರಾಗಿಯೇ ಇತ್ತು. ಆದರೆ, ಯಾವುದೆ ಆಡಂಬರ, ಅಬ್ಬರ ಇಲ್ಲದೇ ಯುಗಾದಿಯ ಶೋಭಾಯಾತ್ರೆಯನ್ನು ನಮ್ಮ ಸಂಸ್ಕೃತಿಯ ಪ್ರತೀಕವಾಗಿ ನಡೆಸಿರುವುದು ಹಲವರ ಮೆಚ್ಚುಗೆಗೆ ಪಾತ್ರವಾಯಿತು.