ಜಿಲ್ಲೆ

ಗುಂಡಿನ ಸೇವೆಗೆ ಕೃಷ್ಣಾಚಲದತ್ತ ಭವ್ಯ ಮೆರವಣಿಗೆ

Chitradurga

ಚಿತ್ರದುರ್ಗ: ಹೊಳಲ್ಕೆರೆ ತಾಲೂಕು ಹೊರಕೆರೆ ದೇವರಪುರದ ಶ್ರೀಲಕ್ಷ್ಮೀನರಸಿಂಹ ಸ್ವಾಮಿಯ ಗುಂಡಿನ ಸೇವೆ, ಅನ್ನದಕೋಟೆ ಪೂಜಾ ಮಹೋತ್ಸವದ ಅಂಗವಾಗಿ ಸೋಮವಾರ ಸ್ವಾಮಿಯ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ಕೃಷ್ಣಾಚಲ ಬೆಟ್ಟದವರೆಗೆ ಸಾಗಿ ಅಲ್ಲಿನ ಮೂಲ ದೇಗುಲ ತಲುಪಿತು.

ಮಹೋತ್ಸವದ ಪ್ರಯುಕ್ತ ದೇಗುಲ ಆವರಣವನ್ನು ವಿವಿಧ ಬಗೆಯ ಪುಷ್ಪ, ವಿದ್ಯುದ್ದೀಪಗಳಿಂದ ವೈಭವೋಪೇತವಾಗಿ ಸಿಂಗರಿಸಲಾಗಿತ್ತು. ಭಕ್ತರ ಕಣ್ಮನ ಸೆಳೆಯುವಂತೆ ಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕರಿಸಿ ಸುಸಜ್ಜಿತ ಉಚ್ಛಾಯದಲ್ಲಿ ಪ್ರತಿಷ್ಠಾಪಿಸಲಾಯಿತು. ಮಧ್ಯಾಹ್ನ 3ಕ್ಕೆ ಎಚ್.ಡಿ.ಪುರದ ದೇಗುಲದಿಂದ ಸ್ವಾಮಿ ಹೊರಬರುತ್ತಿದ್ದಂತೆ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತು.

ಗ್ರಾಮದುದ್ದಕ್ಕೂ ಸ್ವಾಮಿಗೆ ಭವ್ಯ ಸ್ವಾಗತ ದೊರೆಯಿತು. ಅರ್ಚಕರು ಕೃಷ್ಣಾಚಲ ಬೆಟ್ಟದವರೆಗೂ ಸ್ವಾಮಿಯನ್ನು ಹೆಗಲ ಮೇಲೆ ಹೊತ್ತು ಮಂಗಳವಾದ್ಯಗಳೊಂದಿಗೆ ಕರೆದೊಯ್ದರು. ಮೆರವಣಿಗೆ ಸಾಗಿದ ಮಾರ್ಗದಲ್ಲಿ ಛತ್ರಿ, ಚಾಮರಗಳು ರಾರಾಜಿಸಿದವು. ಅಲ್ಲಿಯೂ ಸ್ವಾಮಿಗೆ ಮಹಾಮಂಗಳಾರತಿ ಸೇವೆ ನೆರವೇರಿತು.

ಲಕ್ಷ್ಮೀನರಸಿಂಹಸ್ವಾಮಿ, ಗಣೇಶ, ಈಶ್ವರ, ಲಕ್ಷ್ಮೀದೇವಿ, ಕೃಷ್ಣ, ಕಾಲಭೈರವ, ಆಂಜನೇಯ, ಗ್ರಾಮದೇವತೆ ದೊಡ್ಡ ಕರಿಯಮ್ಮ, ಚಿಕ್ಕ ಕರಿಯಮ್ಮ ಒಳಗೊಂಡು ಗ್ರಾಮದಲ್ಲಿರುವ ಎಲ್ಲಲ ದೇವರ ಮೂರ್ತಿಗಳಿಗೆ ಮುಂಜಾನೆ ಮಹಾಭಿಷೇಕ ಸೇವೆ ಆಯಾ ದೇಗುಲಗಳ ಅರ್ಚಕರಿಂದ ನಡೆಯಿತು.

ಎಚ್.ಡಿ.ಪುರದ ಸ್ವಾಮಿ ದೇಗುಲ ಮುಂಭಾಗ ನಿರ್ಮಿಸಿರುವ ವೈಕುಂಠ ಮಂಟಪಕ್ಕೆ ಸಂಜೆ 5ರ ನಂತರ ಆಹ್ವಾನಿತ ದೇವರುಗಳನ್ನು ಕರೆತರಲಾಯಿತು. ಈ ವೇಳೆ ಕೂಡ ಭಕ್ತರ ಸಂತಸ ಇಮ್ಮಡಿಗೊಂಡಿತ್ತು. ಗ್ರಾಮದೇವತೆ ಕರಿಯಮ್ಮ ದೇವಿ ಮತ್ತು ತಾಳ್ಯದ ಆಂಜನೇಯಸ್ವಾಮಿ ದೇವರ ಉತ್ಸವ ಮೂರ್ತಿಗಳೊಂದಿಗೆ ಪಟ್ಟದ ದಾಸಯ್ಯನನ್ನು ಆತನ ಮನೆಗೆ ರಾತ್ರಿ 9.30ಕ್ಕೆ ಕರೆದುಕೊಂಡು ಹೋಗಲಾಯಿತು. ಅಲ್ಲಿಯೂ ಪೂಜಾ ವಿಧಿವಿಧಾನಗಳು ನೆರವೇರಿದವು.

ಮಹೋತ್ಸವ ಅತ್ಯಂತ ಮಹಿಮೆ ಹೊಂದಿದ್ದು, ಐತಿಹಾಸಿಕ ಆಚರಣೆಯಲ್ಲಿ ಇದೇ ಮೊದಲ ಬಾರಿ ಅವಿವಾಹಿತ ದಾಸಯ್ಯನ ಮೂಲಕ ಚಿನ್ನಗಾಳೆ ಮತ್ತು ಗುಂಡಿನ ದಾಸಯ್ಯ ವಂಶಸ್ಥರಿಂದ ಈ ಸೇವೆ ಜರುಗಲಿದೆ.

*ಬಾಕ್ಸ್*ಸರ್ವರಿಂದಲೂ ಗೋವಿಂದನ ಜಪ

ಸ್ವಾಮಿ ಹೊರಬರುವ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದ ಸಾವಿರಾರು ಭಕ್ತರು ದೇಗುಲ ಮುಂಭಾಗ ಜಮಾಯಿಸಿದ್ದರು. ಮೂರ್ತಿಯನ್ನು ಕಣ್ತುಂಬಿಕೊಂಡು ಪುನೀತರಾದರು. ಶ್ರೀಮನ್ ನಾರಾಯಣ, ಶ್ರೀಹರಿ, ಲಕ್ಷ್ಮೀನರಸಿಂಹ, ಭಕ್ತ ರಕ್ಷಕ ರಂಗಪ್ಪ, ಗೋವಿಂದ, ಗೋವಿಂದ... ಎನ್ನುತ್ತ ಜಯಘೋಷ ಮೊಳಗಿಸಿದರು. ನೆರೆದಿದ್ದ ಸರ್ವರೂ ಗೋವಿಂದನ ಜಪದಲ್ಲಿ ಮಗ್ನರಾದರು.