ಜಿಲ್ಲೆ

ವಿಜಯನಗರದಲ್ಲಿ ಅದ್ಧೂರಿ ಕನ್ನಡ ಸಾಹಿತ್ಯ ಸಮ್ಮೇಳನ: ಕನ್ನಡ ಧ್ವಜ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗಿ

ಬೆಂಗಳೂರು: ರಾಜಧಾನಿ ಸೇರಿದಂತೆ ರಾಜ್ಯದೆಲ್ಲೆಡೆ ಕನ್ನಡದ ಕೆಲಸಗಳಲ್ಲಿ ಕನ್ನಡಿಗರು ಸಕ್ರಿಯವಾಗಿ ಪಾಲ್ಗೊಳ್ಳುವ ಜತೆಗೆ ನಾಡು-ನುಡಿ ಉಳಿಸಲು ಪ್ರತಿಯೊಬ್ಬರೂ ಪಣ ತೊಡಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಕರೆ ನೀಡಿದ್ದಾರೆ.

ವಿಜಯನಗರ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ವೇಳೆ ಮಾತನಾಡಿದ ಅವರು, ಕನ್ನಡಿಗರಿಗೆ ತಮ್ಮ ಶಕ್ತಿಯ ಅರಿವಿಲ್ಲ. ಉದಾಸೀನತೆ ನಿಲುವಿನಿಂದಾಗಿ ಕನ್ನಡಿಗರು ಅಲ್ಪಸಂಖ್ಯಾತರಾಗುವ ಅಪಾಯ ಎದುರಾಗುತ್ತಿದೆ. ಈ ಮನೋಭಾವ ಬಿಟ್ಟು ಕನ್ನಡದ ಬಗ್ಗೆ ಅಭಿಮಾನಧನರಾಗಿ ಕಾರ್ಯನಿರ್ವಹಿಸಿದರೆ ಭಾಷೆ ಬೆಳವಣಿಗೆಗೆ ಸಹಾಯಕವಾಗುತ್ತದೆ ಎಂದು ಪ್ರತಿಪಾದಿಸಿದರು.

ಸಮ್ಮೇಳನಾಧ್ಯಕ್ಷೆ ಮಧುರಾ ಅಶೋಕ್‌ಕುಮಾರ್ ಮಾತನಾಡಿ, ಮಕ್ಕಳ ಗ್ರಹಿಕೆ ಹಾಗೂ ಕಲಿಕೆಯಲ್ಲಿ ಚುರುಕುತನ ಕಾಣಲು ಮಾತೃಭಾಷೆಯಿಂದ ಮಾತ್ರ ಸಾಧ್ಯ. ಈ ಸತ್ಯವನ್ನು ಕನ್ನಡಿಗರು ಅರಿತುಕೊಂಡು ತಮ್ಮ ಮಕ್ಕಳಿಗೆ ಕನ್ನಡದಲ್ಲೇ ಶಿಕ್ಷಣ ಕೊಡಿಸಲು ಮುಂದಾಗಬೇಕು. ಗ್ರಾಮೀಣ ಪ್ರದೇಶದ ಕನ್ನಡ ಶಾಲೆಗಳ ದುಸ್ಥಿತಿಯನ್ನು ಗಮನಿಸಿ ಸರ್ಕಾರ ಅವುಗಳನ್ನು ಪುನರುಜ್ಜೀವನ ಮಾಡುವ ಕೆಲಸವನ್ನು ತುರ್ತಾಗಿ ಕೈಗೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ಶಾಸಕ ಪ್ರಿಯಕೃಷ್ಣ, ಶಾಲಾ ಶಿಕ್ಷಣ ಆಯುಕ್ತ ವಿ.ವಿ.ಗೋಪಾಲ್, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಡಾ.ಶಿವಣ್ಣ, ವಿಜಯನಗರ ಕ್ಷೇತ್ರದ ಕಸಾಪ ಘಟಕದ ಅಧ್ಯಕ್ಷ ಎಸ್.ಬಿ.ಉಮೇಶ್, ಲೇಖಕ ಡಾ. ಭೈರಮಂಗಲ ರಾಮೇಗೌಡ, ಹಿ.ಚಿ.ಬೋರಲಿಂಗಯ್ಯ ಹಾಗೂ ಮತ್ತಿತರರಿದ್ದರು.

ಅದ್ಧೂರಿ ಮೆರವಣಿಗೆಯಲ್ಲಿ ಮಿಂದೆದ್ದ ಜನತೆ:

ಸಭಾ ಕಾರ್ಯಕ್ರಮಕ್ಕೂ ಮುನ್ನ ನಡೆದ ಸಮ್ಮೇಳನಾಧ್ಯಕ್ಷರನ್ನು ವೇದಿಕೆ ಕರೆತರುವ ಮುನ್ನ ನಡೆದ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ವಿವಿಧ ಕಲಾ ತಂಡಗಳು ಭಾಗಿಯಾಗಿದ್ದರು. ನೂರಾರು ಯುವಕರು, ಮಾತೆಯರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡು ಕನ್ನಡದ ಘೋಷಣೆಗಳನ್ನು ಮೊಳಗಿಸಿದರು.

ಕನ್ನಡ ನಮ್ಮ ಮಾತೃಭಾಷೆ. ಈ ಭಾಷೆಯನ್ನು ನಾವೆಲ್ಲರೂ ಬಳಸುವ ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಲು ಕಾಳಜಿ ವಹಿಸಬೇಕು. ನಮ್ಮ ಪರಿಸರದಲ್ಲಿರುವ ಮಕ್ಕಳಿಗೆ ಭಾಷೆಯ ಮೇಲೆ ಅಭಿಮಾನ ಮೂಡುವಂತೆ ನಮ್ಮ ಶಾಲೆಗಳಲ್ಲಿ ಕಾರ್ಯ ನಿರ್ವಹಿಸಬೇಕು. ಈ ಕಾರ್ಯಕ್ಕೆ ಶಾಸಕನಾಗಿ ನನ್ನ ಪೂರ್ಣ ಬೆಂಬಲ ಇರಲಿದೆ.

- ಎಂ.ಕೃಷ್ಣಪ್ಪ, ವಿಜಯನಗರ ಶಾಸಕ