ಬಾಳೆಹೊನ್ನೂರು: ಪಟ್ಟಣದ ವಿದ್ಯಾಗಣಪತಿ ಸೇವಾ ಸಮಿತಿಯ 67ನೇ ವರ್ಷದ ಗಣೇಶೋತ್ಸವ ಸಮಾರಂಭ ಆ.27ರಿಂದ ಸೆ.10 ರವರೆಗೆ ನಡೆಯಲಿದೆ ಎಂದು ಸಮಿತಿ ಕಾರ್ಯದರ್ಶಿ ಸುರೇಂದ್ರ ಹಾಗೂ ಸಿ.ವಿ.ಸುನೀಲ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆ.27ರಂದು ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿದ್ಯಾಗಣಪತಿ ಪ್ರತಿಷ್ಠಾಪನೆ ನಡೆಯಲಿದೆ. ಪ್ರತಿನಿತ್ಯ ಮಧ್ಯಾಹ್ನ, ರಾತ್ರಿ ವಿದ್ಯಾಗಣಪತಿಗೆ ಮಹಾಪೂಜಾ ನೆರವೇರಲಿದೆ. ಪ್ರತಿನಿತ್ಯ ರಾತ್ರಿ 8 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾಡಿನ ಹೆಸರಾಂತ ಕಲಾ ತಂಡಗಳು, ಪ್ರಖ್ಯಾತ ಕಲಾವಿದರುಗಳು ಭಾಗವಹಿಸಲಿದ್ದಾರೆ. ಈ ಬಾರಿ 15 ದಿನ ಗಣೇಶೋತ್ಸವದ ಸಂಭ್ರಮ ನಡೆಯಲಿದೆ.
ಸೆ.9ರಂದು ಬೆಳಗ್ಗೆ ಗಣಪತಿ ಸನ್ನಿಧಿಯಲ್ಲಿ ಗಣಹೋಮ, ಸಂಜೆ 6 ಗಂಟೆಗೆ ಗಣೇಶೋತ್ಸವದ ಸಮಾರೋಪ ಸಮಾರಂಭ ನಡೆಯಲಿದ್ದು, ನೆಲಮಂಗಲ ಶಿವಗಂಗಾ ಕ್ಷೇತ್ರದ ಮೇಲಣಗವಿ ವೀರಸಿಂಹಾಸನ ಮಠದ ಡಾ.ಮಲಯಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಲಿದ್ದಾರೆ. ಸೆ.10ರಂದು ಮಧ್ಯಾಹ್ನ 15 ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 3 ಗಂಟೆ ನಂತರ ವಿದ್ಯಾಗಣಪತಿಯ ಉತ್ಸವ ನಡೆಯಲಿದ್ದು, ಉತ್ಸವದಲ್ಲಿ ಚಲಿಸುವ ಆರ್ಕೆಸ್ಟ್ರಾ, ಕೀಲುಕುದುರೆ, ಗೊಂಬೆ, ಕರಗ ನೃತ್ಯ, ಚಂಡೆ, ಹಲಗೆವಾದನ ಸೇರಿದಂತೆ ಹಲವು ಆಕರ್ಷಣೆಗಳು ಇರಲಿದೆ. ಜೇಸಿ ವೃತ್ತದ ಸಮೀಪ ವಿಶೇಷ ಸಿಡಿಮದ್ದು ಪ್ರದರ್ಶನ ನಡೆಯಲಿದೆ. ನಂತರ ವಿದ್ಯಾಗಣಪತಿಯನ್ನು ಭದ್ರಾನದಿಯಲ್ಲಿ ಜಲಸ್ತಂಭನಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.