ಜಿಲ್ಲೆ

ಅಜ್ಜ-ಅಜ್ಜಿಯ ಕೊಲೆಗೈದು ಚಿನ್ನಾಭರಣ ಮಾರಾಟಕ್ಕೆ ಮಂಗಳೂರಿಗೆ ಬಂದಿದ್ದ ಆರೋಪಿ ಪೊಲೀಸ್ ಬಲೆಗೆ

ಮಂಗಳೂರು: ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಅಜ್ಜ, ಅಜ್ಜಿಯನ್ನು ಕೊಲೆಗೈದು ಚಿನ್ನಾಭರಣ ದೋಚಿಕೊಂಡು ಬಂದು ಮಂಗಳೂರಿನಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಆರೋಪಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ.


ಕೇರಳದ ತ್ರಿಶೂರ್ ಜಿಲ್ಲೆಯ ವೈಲತ್ತೂರು, ಪನಾಂಗೈಲ್ ನಿವಾಸಿ ಅಹಮ್ಮದ್ ಅಕ್ಮಲ್ (27) ಬಂಧಿತ ಆರೋಪಿ.
ಈತ ಜುಲೈ 23ರಂದು ರಾತ್ರಿ ತನ್ನ ಅಜ್ಜ ಮತ್ತು ಅಜ್ಜಿಯನ್ನು ಕೊಲೆ ಮಾಡಿ ಅವರ ಚಿನ್ನಾಭರಣಗಳನ್ನು ದೋಚಿ ಬಂದಿರುವುದನ್ನು ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಆತನ ಬಳಿಯಲ್ಲಿ ಮುತ್ತಿನ ಎರಡು ಎಳೆಯ ಬಂಗಾರದ ಸರ 1, ಸಣ್ಣ ಪದಕವಿರುವ ಚೈನ್ 1, ಕಿವಿಯೋಲೆ 3 ಜೊತೆ, ಉಂಗುರ 5, ಕೈ ಬಳೆ 2, ಪಾಸ್‌ಪೋರ್ಟ್ ಹಾಗೂ ಇತರ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.


ಆರೋಪಿ ನಗರದ ಕಾಲೇಜೊಂದರ ಹಳೇ ವಿದ್ಯಾರ್ಥಿಯಾಗಿದ್ದು, ಮಂಗಳೂರು ಚಿರಪರಿಚಿತವಾದ ಕಾರಣ ಚಿನ್ನಾಭರಣ ಮಾರಾಟ ಮಾಡಲು ಮಂಗಳೂರಿಗೆ ಬಂದಿದ್ದ. ಆತನನ್ನು ಕಾನೂನು ಪ್ರಕ್ರಿಯೆಗಳನ್ನು ನಡೆಸಿ, ಕೊಲೆ ನಡೆದ ಕೇರಳದ ಸಂಬಂಧಪಟ್ಟ ಪೊಲೀಸರಿಗೆ ಹಸ್ತಾಂತರ ಮಾಡಿದ್ದು, ಅಲ್ಲಿನ ಪೊಲೀಸರು ಸೋಮವಾರ ರಾತ್ರಿಯೇ ಆತನನ್ನು ಕರೆದೊಯ್ದಿದ್ದಾರೆ.


ಎಸಿಪಿ ಮಹೇಶ್ ಕುಮಾರ್ ನಿರ್ದೇಶನದಂತೆ ಬಂದರು ಠಾಣೆ ಇನ್‌ಸ್ಪೆಕ್ಟರ್ ರಾಘವೇಂದ್ರ ಬೈಂದೂರು ನೇತೃತ್ವದಲ್ಲಿ ಪಿಎಸ್‌ಐ ದಾಮೋದರ್, ಸಿಬ್ಬಂದಿ ಮದನ್ ಸಿ.ಎಂ., ಸತೀಶ್ ಹಾಗೂ ಗುರು ಬಿ.ಟಿ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.