ವಿಜಯಪುರ: ಬಸವಾದಿ ಪ್ರಮಥರ ಸಂದೇಶಗಳನ್ನು ಸಾರಿದ, ಭಾವೈಕ್ಯತೆಯ ಪ್ರತೀಕವಾಗಿರುವ ಶ್ರೀ ಶರಣಬಸವೇಶ್ವರರ ಜಾತ್ರೋತ್ಸವ ಹಿನ್ನೆಲೆ ನಡೆಯಲಿರುವ ಮಹಾರಥೋತ್ಸವಕ್ಕೆ ಹಿರೇಮಸಳಿ ಗ್ರಾಮ ಸಜ್ಜಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ಜಾತ್ರೆ ನೆರವೇರಿಸಲಾಗುತ್ತಿದ್ದು, ಐದು ದಿನಗಳ ಕಾಲ ವಿವಿಧ ಸಾಂಸ್ಕೃತಿಕ, ಧಾರ್ಮಿಕ, ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮೇ 17 ರಿಂದಲೇ ಶ್ರೀ ಸಂತ ಶಿಶುನಾಳ ಶರೀಫ್ ಶಿವಯೋಗಿಗಳ ಜೀವನ ದರ್ಶನ ಪ್ರವಚನ ಆರಂಭಿಸಲಾಗಿದೆ. ಗದಗನ ಆಧ್ಯಾತ್ಮ ವಿದ್ಯಾಶ್ರಮದ ಶಿವಶರಣೆ ಮೈತ್ರಾದೇವಿ ಪ್ರವಚನ ನೀಡುತ್ತಾ ಬಂದಿದ್ದು, ಸೋಮವಾರ ಸಂಜೆ ಮಂಗಲ ಕೋರಲಾಯಿತು.
ಮಂಗಳವಾರ ನಡೆಯಲಿರುವ ಮಹಾರಥೋತ್ಸವ ಹಿನ್ನೆಲೆ ಹೋಮ-ಹವನ ನೆರವೇರಿಸಲಾಯಿತು. ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ ಮತ್ತು ಸಹಸ್ರ ಬಿಲ್ವಾರ್ಚನೆ ನೆರವೇರಿಸಲಾಯಿತು. ಪಲ್ಲಕ್ಕಿ ಉತ್ಸವ, ನಂದಿಕೋಲು ಮೆರವಣಿಗೆ, ಡೊಳ್ಳು ಕುಣಿತ, ಕುಂಭ ಮೆರವಣಿಗೆ ಜಾತ್ರೋತ್ಸವದ ಮೆರಗು ಹೆಚ್ಚಿಸಿತು.
ಬಂಥನಾಳದ ವೃಷಭಲಿಂಗ ಶ್ರೀಗಳ ಅಮೃತ ಹಸ್ತದೊಂದಿಗೆ ಮಹಾರಥೋತ್ಸವ ಜರುಗಲಿದ್ದು, ಬಳಿಕ ಭಜನೆ ಕಾರ್ಯಕ್ರಮ ನೆರವೇರಲಿದೆ. ಮೇ 29 ರಂದು ಸಂಜೆ 4ಕ್ಕೆ ಜಂಗಿ ನಿಕಾಲಿ ಕುಸ್ತಿ ನೆರವೇರಲಿದೆ. ರಾತ್ರಿ 8ಕ್ಕೆ ಚಿತ್ರ-ವಿಚಿತ್ರ ಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ 10ಕ್ಕೆ ಬಾಗಲಕೋಟೆ ಜಿಲ್ಲೆಯ ರಬಕವಿ ತಾಲೂಕಿನ ಕಲ್ಲಳ್ಳಿಯ ಶ್ರೀ ಶಿವಲಿಂಗೇಶ್ವರ ನಾಟ್ಯ ಸಂಘದಿಂದ ವಿಧವೆಗೆ ಬಂತು ತಾಳಿಯ ಭಾಗ್ಯ ಅರ್ಥಾರ್ತ ಕೂಡಿ ಬಂದ ಕಂಕಣಬಲ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಜೂನ್ 1 ರಂದು ಸಂಜೆ 6ಕ್ಕೆ ಕಳಸ ಇಳಿಸುವ ಕಾರ್ಯಕ್ರಮದೊಂದಿಗೆ ಜಾತ್ರೋತ್ಸವಕ್ಕೆ ತೆರೆ ಬೀಳಲಿದೆ ಎಂದು ಜಾತ್ರಾ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ.