ಕುಶಾಲನಗರ:
ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ 2023- 24ನೇ ಸಾಲಿನ ಮುಂದುವರಿದ ಮೊದಲ ಹಂತದ ಗ್ರಾಮ ಸಭೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಶೋಭಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ಸಿದ್ದಲಿಂಗಪುರದ ಸಮುದಾಯ ಭವನ ಸಭಾಂಗಣದಲ್ಲಿ ಸೋಮವಾರ ನಡೆಯಿತು.
ಸಭೆಯ ಆರಂಭದಲ್ಲಿ ಕಳೆದ ಸಾಲಿನ ಗ್ರಾಮ ಸಭೆಯ ವರದಿ ವಾಚಿಸಿದ ನಂತರ ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಜಲಜೀವನ್ ಕುಡಿಯುವ ನೀರಿನ ಸರಬರಾಜು ಯೋಜನೆಯ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ. ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಇದರಿಂದಾಗಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಇದರ ಬಗ್ಗೆ ಸವಿಸ್ತಾರವಾದ ವರದಿ ನೀಡುವಂತೆ ಗ್ರಾಮಸ್ಥರಾದ ಟಿ.ಕೆ. ಪಾಂಡುರAಗ, ಪಿ.ಡಿ. ರವಿ, ಮೂರ್ತಿ ಒತ್ತಾಯ ಮಾಡಿದರು.
ಇದಕ್ಕೆ ಉತ್ತರಿಸಿದ ಗ್ರಾಮಾಂತರ ಕುಡಿಯುವ ನೀರು ಸರಬರಾಜು ಇಲಾಖೆಯ ಎಂಜಿನಿಯರ್ ವೀರೇಂದ್ರ ಕುಮಾರ್ ಯೋಜನೆಯ ಬಗ್ಗೆ, ಮತ್ತು ಮುಂದಿನ ದಿನಗಳಲ್ಲಿ ಅಗಬೇಕಾಗಿರುವ ವಿಷಯಗಳ ಬಗ್ಗೆ ಸಮರ್ಪಕವಾದ ಮಾಹಿತಿಯನ್ನು ಸಭೆಗೆ ತಿಳಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆನೆ ಕಂದಕಗಳು ಸಮರ್ಪಕವಾಗಿ ಇಲ್ಲದ ಕಾರಣದಿಂದಾಗಿ ಕಾಡಾನೆಗಳ ಹಾವಾಳಿ ಬಗ್ಗೆ, ವಸತಿ ರಹಿತರಿಗೆ ಕಾಯ್ದಿರಿಸಿದ ಜಾಗದಲ್ಲಿ ವಸತಿ ಸೌಕರ್ಯ ವ್ಯವಸ್ಥೆ ಬಗ್ಗೆ ಚರ್ಚೆ ನಡೆತು.
ಸಭೆಯಲ್ಲಿ ಹಾಜರಿದ್ದ ಗ್ರಾಮಸ್ಥರಾದ ಪಿ.ಡಿ.ರವಿ, ಜಗದೀಶ್, ಕೃಷ್ಣ ಗೌಡ, ರಾಮಕೃಷ್ಣ, ಮಹದೇವ, ಸುದೇಶ್, ಮೂರ್ತಿ ಸೇರಿದಂತೆ ಹಲವರು ಚರ್ಚೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ಹಾಜರಿದ್ದ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಸವಲತ್ತುಗಳ ಸದುಪಯೋಗದ ಬಗ್ಗೆ ಮಾಹಿತಿ ನೀಡಿದರು.
ಸಭೆಯ ನೋಡಲ್ ಅಧಿಕಾರಿಯಾಗಿ ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಪಿ.ವಿ. ಶ್ರೀನಿವಾಸ್ ಆಗಮಿಸಿದ್ದರು. ಸಭೆಯಲ್ಲಿ ಪಂಚಾಯತಿ ಸದಸ್ಯರಾದ ಶಿವಕುಮಾರ್, ದೇವರಾಜ್, ಪ್ರಕಾಶ್, ಯಶೋಧ, ಸಾವಿತ್ರಿ, ನಿಂಗಜಮ್ಮ, ಮಹದೇವ್, ಕೆ.ಡಿ.ಪಿ. ಸದಸ್ಯ ಜಗದೀಶ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಸಂಜೀವಯ್ಯ ಸೇರಿದಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನೂರಾರು ಗ್ರಾಮಸ್ಥರು, ಅಭಿವೃದ್ಧಿ ಅಧಿಕಾರಿ ಶ್ಯಾಮ್ ಇದ್ದರು.