ಮುಳಗುಂದ: ನಲ್ಲಿ ನೀರು ಸೋರುತ್ತಿದೆ ಎಂದು ರಸ್ತೆ ಮೇಲೊಂದು ಗುಂಡಿ ತೋಡಿ ಅದನ್ನು ಮುಚ್ಚದೆ ಹಾಗೆಯೇ ಬಿಟ್ಟ ಘಟನೆ ಚಿಂಚಲಿ ಗ್ರಾಪಂನ ನೀಲಗುಂದ ಗ್ರಾಮದಲ್ಲಿ ನಡೆದಿದೆ.
ಗುಂಡಿ ತೋಡಿ ಎರಡ್ಮೂರು ತಿಂಗಳು ಕಳೆದರೂ ಅದನ್ನು ಮುಚ್ಚದೆ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಪಿಡಿಒ, ಅಧ್ಯಕ್ಷ, ಸದಸ್ಯರಿಗೆ ಮೌಖಿಕವಾಗಿ ತಿಳಿಸಿದರೂ ಪ್ರಯೋಜನವಾಗಿಲ್ಲ. ನೈಸರ್ಗಿಕವಾಗಿ ಗುಂಡಿ ಬಿದ್ದರೆ ಗತಿಯೇನು ಎಂದು ಜನ ಪಿಡಿಒ, ಜನಪ್ರತಿನಿಧಿಗಳಿಗೆ ಶಾಪ ಹಾಕುವಂತಾಗಿದೆ.
ರಸ್ತೆ ಮಧ್ಯದಲ್ಲೊಂದು ತಗ್ಗು ಗುಂಡಿ ತೋಡಿರುವುದು ನೀಲಗುಂದದ ಚಳ್ಳಮ್ಮದೇವಿ ದೇವಸ್ಥಾನದ ಹತ್ತಿರ. ನಳದ ಪೈಪ್ ನೀರು ಸೋರುವುದನ್ನು ನಿಲ್ಲಿಸಲು ಈ ತಗ್ಗು ತೋಡಲಾಗಿದೆ. ಆದರೆ ಅದನ್ನು ರಿಪೇರಿ ಮಾಡಿದ ನಂತರ ಮುಚ್ಚಿ ಹೋಗಬೇಕೆನ್ನುವ ಅರಿವು ಅಧಿಕಾರಿಗಳಿಗಿಲ್ಲ. ಈ ರಸ್ತೆಯ ಮೇಲೆ ಮಕ್ಕಳು ವೃದ್ಧರು ಸಂಚರಿಸುವುದು ಕಷ್ಟವಾಗಿದ್ದು, ಇನ್ನು ರಾತ್ರಿ ಸಮಯದಲ್ಲಿ ವಿದ್ಯುತ್ ಕಡಿತವಾದಾಗ ಅನೇಕ ಜನರು ಈ ತಗ್ಗು ಗುಂಡಿಯಲ್ಲಿ ಬಿದ್ದ ಪ್ರಸಂಗಗಳುಂಟು. ಹಾಗೆಯೇ ಬಿದ್ದರೂ ಗ್ರಾಪಂನವರು ಮುಚ್ಚುವ ಗೋಜಿಗೆ ಹೋಗಿಲ್ಲ.