ಜಿಲ್ಲೆ

ಗ್ರಾಪಂ ಸದಸ್ಯೆ ಪತಿಯೇ ವಾಟರ್‌ಮನ್

ಎನ್.ವೆಂಕಟೇಶ್

ಅಕ್ರಮ ನೇಮಕ ವಜಾ ಮಾಡುವಂತೆ ಗುರಾಲದಿನ್ನೆ ಗ್ರಾಮಸ್ಥರ ಪ್ರತಿಭಟನೆ ಯಲ್ಲಂಪಲ್ಲಿ ಗ್ರಾಪಂ ಕಾರ್ಯದರ್ಶಿಗೆ ಮನವಿ

ಬಾಗೇಪಲ್ಲಿ: ತಾಲೂಕಿನ ಯಲ್ಲಂಪಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆಯೊಬ್ಬರು ಪತಿಯನ್ನೇ ಗುರಾಲದಿನ್ನೆ ಗ್ರಾಮಕ್ಕೆ ವಾಟರ್‌ಮನ್ ಆಗಿ ನೇಮಕ ಮಾಡಿರುವುದನ್ನು ವಿರೋಧಿಸಿರುವ ಗ್ರಾಮಸ್ಥರು ಆತನನ್ನು ವಜಾ ಮಾಡಬೇಕು ಹಾಗೂ ಕರ್ತವ್ಯ ನಿರ್ವಹಣೆ ವೇಳೆ ಕಾಲು ಮುರಿದುಕೊಂಡಿದ್ದ ವಾಟರ್‌ಮನ್‌ಗೆ ನ್ಯಾಯ ಒದಗಿಸಬೇಕು ಎಂದು ಯಲ್ಲಂಪಲ್ಲಿ ಪಂಚಾಯಿತಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಪಂಚಾಯಿತಿ ಕಾರ್ಯದರ್ಶಿ ಚಂದ್ರಾರೆಡ್ಡಿಗೆ ಮನವಿ ಸಲ್ಲಿಸಿದರು.

ಗುರಾಲದಿನ್ನೆ ಗ್ರಾಮದ ಎ.ಶ್ರೀನಿವಾಸ್ ಮಾತನಾಡಿ, 2001ರಿಂದ 2006ರವರೆಗೆ ಗುರ‌್ರಾಲದಿನ್ನೆ ಗ್ರಾಮದ ನಾರಾಯಣಸ್ವಾಮಿ ಎಂಬುವವರು ವಾಟರ್‌ಮನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಗ್ರಾಮಕ್ಕೆ ನೀರು ಪೂರೈಸುವ ಕೊಳವೆಬಾವಿ ಮೋಟಾರ್ ದುರಸ್ತಿ ಮಾಡುವ ವೇಳೆ ಕೇಬಲ್ ವೈರ್ ಕಾಲಿಗೆ ಸುತ್ತಿಕೊಂಡು ಬಿದ್ದು ಕಾಲು ಮುರಿದಿತ್ತು. ಈ ಸಂದರ್ಭದಲ್ಲಿ ಬದಲಿಗೆ ರಾಮಪ್ಪ ಎಂಬಾತನನ್ನು ವಾಟರ್‌ಮನ್ ಕೆಲಸಕ್ಕೆ ತಾತ್ಕಾಲಿಕವಾಗಿ ನೇಮಕ ಮಾಡಲಾಗಿತ್ತು. ಹಾಗೂ ನಾರಾಯಣಸ್ವಾಮಿಗೆ ನೀಡುತ್ತಿದ್ದ ವೇತನವನ್ನು ಸಹ ರಾಮಪ್ಪನಿಗೆ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ, ಗುರಾಲದಿನ್ನೆಯ ಪಂಚಾಯಿತಿ ಸದಸ್ಯೆ ಸುಜಾತಾ ಅವರ ಪತಿ ಜಿ.ವಿ. ಶ್ರೀನಿವಾಸ ಪತ್ನಿಯ ಅಧಿಕಾರ ದುರುಪಯೋಗಪಡಿಸಿಕೊಂಡು ರಾಮಪ್ಪನ ಜಾಗದಲ್ಲಿ ತನ್ನ ಹೆಸರು ಸೇರಿಸಿದ್ದಲ್ಲದೇ, ರಾಮಪ್ಪ ಬಳಿ ಇದ್ದ ಬೋರ್‌ವೇಲ್ ಬೀಗದ ಕೀಲಿಗಳನ್ನು ಕಿತ್ತುಕೊಂಡಿದ್ದು ಪತ್ನಿಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಈ ಬಗ್ಗೆ ಗುರಾಲದಿನ್ನೆ ಗ್ರಾಮಸ್ಥರು ಪಂಚಾಯಿತಿ ಕಚೇರಿಗೆ ಮನವಿ ಮಾಡಿದರೂ ಪಿಡಿಒ ಮತ್ತು ಇತರ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಎಸ್‌ಎಫ್‌ಐ ಮುಖಂಡ ಸೋಮಶೇಖರ್, ಗ್ರಾಮಸ್ಥರಾದ ಶ್ರೀನಿವಾಸ, ನಾಗೇಂದ್ರ, ಅಶ್ವತ್ಥಮ್ಮ, ಎಂ.ಶ್ರೀನಿವಾಸ, ವೆಂಕಟೇಶಪ್ಪ, ಪಲ್ಲಿ ಶ್ರೀನಿವಾಸ, ಬಾಲಾಜಿನಾಯಕ, ಟಿ.ಶ್ರೀನಿವಾಸ, ಮದನ್, ನಾರಾಯಣಸ್ವಾಮಿ, ಅಶ್ವತ್ಥಪ್ಪ ಮತ್ತಿತರರು ಇದ್ದರು.

ತನಿಖೆ ನಡೆಸದೆ ಕಾಲಹರಣ

ವಾಟರ್‌ಮನ್ ಅಕ್ರಮ ನೇಮಕದ ಬಗ್ಗೆ ಜಿಪಂ ಸಿಇಒ ಹಾಗೂ ಬಾಗೇಪಲ್ಲಿ ತಾಪಂ ಇಒ ಅವರಿಗೂ ದೂರು ಸಲ್ಲಿಸಿದ್ದು, ಅಕ್ರಮ ನೇಮಕಾತಿ ಬಗ್ಗೆ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಆದರೆ, ಸ್ಥಳೀಯ ರಾಜಕೀಯ ಪ್ರಭಾವಿಗಳ ಒತ್ತಡಕ್ಕೆ ಒಳಗಾಗಿರುವ ಗ್ರಾಪಂ ಅಧಿಕಾರಿಗಳು ತನಿಖೆ ನಡೆಸದೆ ಕಾಲಹರಣ ಮಾಡುತ್ತಿದ್ದಾರೆ ಎಂದು ಶ್ರೀನಿವಾಸ್ ಆರೋಪಿಸಿದರು.

ಅನುಮೋದನೆಯೇ ಅಕ್ರಮ

2016ರಲ್ಲಿ ನಕಲಿ ದಾಖಲೆಗಳನ್ನು ನೀಡಿ ಗ್ರಾಮ ಪಂಚಾಯತಿ ಸದಸ್ಯರ ಸಹಿ ಇಲ್ಲದೆ ಅಕ್ರಮವಾಗಿ ನೇಮಕಾತಿಗೆ ಅನುಮೋದನೆ ಪಡೆಯಲಾಗಿದೆ. ಆದ್ದರಿಂದ ಈ ಅನುಮೋದನೆಯನ್ನು ರದ್ದುಪಡಿಸಿ ಜಿ.ವಿ. ಶ್ರೀನಿವಾಸ್ ಅವರನ್ನು ಕೈಬಿಟ್ಟು ಅವರು ಪಡೆದಿರುವ ಸಂಪೂರ್ಣ ವೇತನವನ್ನು ಹಿಂಪಡೆಯಬೇಕು. ಹಾಗೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ನಾರಾಯಣಸ್ವಾಮಿ ಅವರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಶ್ರೀನಿವಾಸ್ ಒತ್ತಾಯಿಸಿದ್ದಾರೆ.