ಜಿಲ್ಲೆ

ನೇಣಿಗೆ ಶರಣಾಗಲು ಗ್ರಾಪಂ ಸದಸ್ಯ ಯತ್ನ

ರಾಜಣ್ಣ

ಹನೂರು: ತಾಲೂಕಿನ ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿಯಲ್ಲಿ ಕಳೆದ 2 ತಿಂಗಳ ಹಿಂದೆ ನಡೆದ ಸಭೆಯಲ್ಲಿ ಕಾಮಗಾರಿ ಹಾಗೂ ಬಿಲ್ ಪಾವತಿ ಸಂಬಂಧ ಸದಸ್ಯನೊಬ್ಬ ಫ್ಯಾನ್‌ಗೆ ನೇಣು ಬಿಗಿದುಕೊಳ್ಳಲು ಯತ್ನಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.


2 ತಿಂಗಳ ಹಿಂದೆ ಗ್ರಾಪಂನಲ್ಲಿ ಸಾಮಾನ್ಯ ಸಭೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ಸದಸ್ಯ ಸರದಾರ್ ಅವರು ನರೇಗಾ ಯೋಜನೆಯಡಿ ಕಾಮಗಾರಿ ಹಾಗೂ ಹಣ ಪಾವತಿ ಸಂಬಂಧ ಸಭೆಯಲ್ಲಿ ಗಮನಕ್ಕೆ ತಂದಿದ್ದರು. ಆದರೆ ಇದಕ್ಕೊಪ್ಪದ ಅಧಿಕಾರಿಗಳು ಹಾಗೂ ಕೆಲ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಇದರಿಂದ ಆಕ್ರೋಶಗೊಂಡ ಸರದಾರ್ ಟವೆಲ್‌ನಿಂದ ಫ್ಯಾನಿಗೆ ನೇಣು ಬಿಗಿದುಕೊಳ್ಳಲು ಮುಂದಾಗಿದ್ದರು. ಈ ವೇಳೆ ಸದಸ್ಯರು ಅವರನ್ನು ಸಮಾಧಾನಪಡಿಸಿದ್ದರು. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಈ ಸಂಬಂಧ ಮಂಗಳವಾರ ಪಿಡಿಒ ರಂಗರಾಜು ವಿಜಯವಾಣಿಯೊಂದಿಗೆ ಪ್ರತಿಕ್ರಿಯಿಸಿ, ಘಟನೆಗೆ ಸಂಬಂಧಿಸಿದಂತೆ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಇದೀಗ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು.