ಜಿಲ್ಲೆ

ರಣತೂರ ಗ್ರಾಮದಲ್ಲಿ ಜಟಾಪಟಿ

Gadag

ಶಿರಹಟ್ಟಿ:ತಾಲೂಕಿನ ರಣತೂರ ಗ್ರಾಪಂ ವ್ಯಾಪ್ತಿಯ ದೇವಿಹಾಳ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳಾ ಅಭ್ಯರ್ಥಿ ಸಲ್ಲಿಸಿದ ನಾಮಪತ್ರ ಕ್ರಮಬದ್ಧವಾಗಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ರಣತೂರ ಗ್ರಾಪಂ ಕಚೇರಿ ಬಳಿ ಕೆಲಕಾಲ ಉದ್ವಿಗ್ನ ವಾತಾವರಣ ಉಂಟಾಯಿತು.

ದೇವಿಹಾಳ ಗ್ರಾಮದ ವಾರ್ಡ್ ನಂಬರ್ 1ರಲ್ಲಿ ದೇವಮ್ಮ ಶರಣಪ್ಪ ತಳವಾರ ಅವರು ಸಲ್ಲಿಸಿದ ನಾಮಪತ್ರವು ಕ್ರಮಬದ್ಧ್ದಲ್ಲ. ಆದರೂ ಕ್ರಮಬದ್ಧ ಎಂದು ಸ್ವೀಕರಿಸಿದ್ದು ಕಾನೂನುಬಾಹಿರ. ದೇವಮ್ಮ ತಳವಾರ ಅವರು ಡಂಬಳ ಗ್ರಾಮದ ನಿವಾಸಿಯಾಗಿದ್ದು, ಸ್ಥಳೀಯವಾಗಿ ಅವರ ಬಳಿ ಮತದಾರರ ಗುರುತಿನ ಚೀಟಿ, ರೇಶನ್, ಆಧಾರ ಕಾರ್ಡ್​ಗಳಿಲ್ಲ ಎಂದು ದೇವಿಹಾಳ ಗ್ರಾಮದ ಸಂಜೀವ ಕುಮಾರ ಕೂಗಟಿ ಅವರು ಚುನಾವಣಾಧಿಕಾರಿ ನೇತ್ರಾವತಿ ಪಟ್ಟೇದ ಅವರಿಗೆ ದೂರು ನೀಡಿದರು.

ಬಿಜೆಪಿ ಬೆಂಬಲಿತ ಅಭ್ಯರ್ಥಿ ಎನ್ನಲಾದ ದೇವಮ್ಮ ತಳವಾರ ತಮ್ಮ ಬೆಂಬಲಿಗರ ಜತೆಗೆ ಸಂಜೆ 4ಕ್ಕೆ ಗ್ರಾಪಂ ಆವರಣಕ್ಕೆ ಆಗಮಿಸಿದಾಗ ಕೆಲ ಕಾಲ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ದೇವಮ್ಮ ತಳವಾರ ಅವರು ಗ್ರಾಪಂ ಕಚೇರಿಗೆ ಒಳ ಪ್ರವೇಶಿಸಿದ ನಂತರ ಇತರ ಅಭ್ಯರ್ಥಿಗಳನ್ನು ಹೊರಹಾಕಿ ಸುಮಾರು ಒಂದು ಗಂಟೆ ಬಾಗಿಲು ಮುಚ್ಚಿದ್ದರಿಂದ ಸಂಶಯಗೊಂಡ ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆ ಅಧಿಕಾರಿ ವಿರುದ್ಧ ಘೊಷಣೆ ಕೂಗಲಾರಂಭಿಸಿದರು. ನಂತರ ಪಿಎಸ್​ಐ ಎಸ್.ಎನ್. ನಾಯಕ ಅವರು ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ನನಗೆ ಬೆದರಿಕೆ ಕರೆ ಬಂದಿದ್ದರಿಂದ ನನ್ನ ರಕ್ಷಣೆಗಾಗಿ ಬಾಗಿಲು ಹಾಕಿಕೊಂಡು ಕುಳಿತಿದ್ದು ನಿಜ. ಪೊಲೀಸ್ ಸಿಬ್ಬಂದಿ ಬಂದ ಮೇಲೆ ಧೈರ್ಯದಿಂದ ಹೊರಗೆ ಬಂದೆ. - ದೇವಮ್ಮ ಶರಣಪ್ಪ ತಳವಾರ
ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ಸ್ಥಳೀಯವಾಗಿರದೇ ಡಂಬಳ ಗ್ರಾಮಕ್ಕೆ ಸೇರಿದವರಾಗಿದ್ದಾರೆ. ಆದರೂ ಚುನಾವಣೆ ಅಧಿಕಾರಿ ನಾಮಪತ್ರ ತಿರಸ್ಕರಿಸದೆ, ಸಿಂಧುವಾಗಿ ಪರಿಗಣಿಸಿ ಕರ್ತವ್ಯ ಲೋಪವೆಸಗಿದ್ದಾರೆ. ಈ ಬಗ್ಗೆ ವಿಚಾರಣೆ ಆಗಬೇಕು. | ಎಚ್.ಡಿ. ಮಾಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿರಹಟ್ಟಿ