ಮಳವಳ್ಳಿ: ತಾಲೂಕಿನ ಅನತಿ ದೂರದಲ್ಲಿರುವ ರಾವಣಿ ಗ್ರಾಮ ಅಭಿವೃದ್ಧಿಯಿಂದ ದೂರ ಉಳಿದಿದೆ…!
ಹಳ್ಳಿಗಳ ಸುಧಾರಣೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೂರಾರು ಕೋಟಿ ರೂ. ಅನುದಾನವನ್ನು ವ್ಯಯಿಸುತ್ತಿವೆ. ಆದರೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಮತ್ತು ಆಡಳಿತ ವ್ಯವಸ್ಥೆಯ ವೈಫಲ್ಯದಿಂದ ರಾವಣಿ ಗ್ರಾಮ ಅಭಿವೃದ್ಧಿಯಿಂದ ವಂಚಿತವಾಗಿದೆ. ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಹದಗೆಟ್ಟ ರಸ್ತೆಗಳ ಜತೆಗೆ ಮೂಲ ಸೌಕರ್ಯಗಳಿಂದ ವಂಚಿತವಾಗಿ ಸೊರಗುತ್ತಿದೆ.
ತಾಲೂಕಿನ ಕಸಬಾ ಹೋಬಳಿಯ ಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂರಿಗಾಲಿ ಮುಖ್ಯರಸ್ತೆ ಬದಿ ಹಾಗೂ ವಾರೇಹಳ್ಳಿ ಕೆರೆಗೆ ಹೊಂದಿಕೊಂಡಂತೆ ರಾವಣಿ ಗ್ರಾಮವಿದೆ. ಈ ಗ್ರಾಮದಲ್ಲಿ 2500ಕ್ಕೂ ಅಧಿಕ ಮತದಾರರಿದ್ದು, 4 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಒಳಗೊಂಡಿದೆ. ಇಲ್ಲಿನ ಬಹುತೇಕರು ರೈತಾಪಿ ವರ್ಗದವರಾಗಿದ್ದು, ರೇಷ್ಮೆ, ತೋಟಗಾರಿಕೆ ಬೆಳೆಗಳನ್ನು ಬೆಳೆಯುವವರು ಹೆಚ್ಚಿದ್ದರೂ ಜೀವನೋಪಾಯಕ್ಕೆ ಹೈನೋದ್ಯಮವನ್ನು ಅವಲಂಬಿಸಿದ್ದಾರೆ. ಕ್ಯಾತನಹಳ್ಳಿ ಗ್ರಾಮ ಪಂಚಾಯಿತಿಗೆ ಈ ಗ್ರಾಮದಿಂದ ಆರು ಸದಸ್ಯರು ಆಯ್ಕೆಯಾಗಿದ್ದಾರೆ. ಆದರೆ ಗ್ರಾಪಂ ಆಡಳಿತದಲ್ಲಿರುವ ತಮ್ಮ ಹಕ್ಕುಗಳನ್ನು ಚಲಾಯಿಸಿ ಗ್ರಾಮದ ಸ್ವಚ್ಛತೆ ನಿರ್ವಹಣೆ ವಾಡುವಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
ಗಬ್ಬನಾರುತ್ತಿವೆ ಚರಂಡಿಗಳು: ಗ್ರಾಮದಲ್ಲಿರುವ ಬಹುತೇಕ ಚರಂಡಿಗಳನ್ನು ಸ್ವಚ್ಛಗೊಳಿಸದ ಕಾರಣ ಗಿಡ-ಗಂಟಿಗಳು ಬೆಳೆದು ನಿಂತಿದ್ದು, ಕೊಳಚೆ ನೀರು ನಿಂತಲ್ಲೇ ನಿಂತು ಗಬ್ಬು ನಾರುತ್ತಿವೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಗ್ರಾಮದ ವಿವಿಧೆಡೆ ಹಸಿ ಹಾಗೂ ಒಣ ಕಸ ಹಾಕಲು ಬುಟ್ಟಿಗಳನ್ನು ಅಳವಡಿಸಲಾಗಿದೆ. ಆದರೆ ಈ ಬುಟ್ಟಿಗಳಲ್ಲಿ ತುಂಬಿರುವ ತ್ಯಾಜ್ಯ ವಿಲೇವಾರಿ ವಾಡಿ ವರ್ಷಗಳೇ ಕಳೆದಿದ್ದು, ಗ್ರಾಪಂ ಆಡಳಿತದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಂತಾಗಿದೆ.
ಸ್ವಾಗತ ನೀಡುವ ರಸ್ತೆ ಗುಂಡಿಗಳು: ಗ್ರಾಮದ ಕೆಲ ರಸ್ತೆಗಳನ್ನು ಹೊರತುಪಡಿಸಿ ಮುಖ್ಯರಸ್ತೆಯುದ್ದಕ್ಕೂ ಗುಂಡಿ ಬಿದ್ದು ಹದಗೆಟ್ಟು ಹೋಗಿವೆ. ಗ್ರಾಮದ ಕೊನೆಯಲ್ಲಿ ಡೇರಿ ಹಾಗೂ ಸರ್ಕಾರಿ ಶಾಲೆ ಇರುವುದರಿಂದ ಇಲ್ಲಿನ ಮುಖ್ಯ ರಸ್ತೆ ಮೂಲಕ ಜನರೆಲ್ಲ ಪ್ರತಿದಿನ ಡೇರಿಗೆ ಹಾಲು ಹಾಕಲು ಸಂಚರಿಸಬೇಕು. ಇಲ್ಲಿನ ರಸ್ತೆ ಅಭಿವೃದ್ಧಿಪಡಿಸುವಂತೆ ಹಲವು ವರ್ಷಗಳಿಂದ ಜನಪ್ರತಿನಿಧಿಗಳಲ್ಲಿ ಗ್ರಾಮಸ್ಥರು ಮನವಿ ವಾಡಿಕೊಂಡಿದ್ದರೂ ಭರವಸೆ ವಾತುಗಳಲ್ಲೇ ಕಾಲದೂಡುತ್ತಿದ್ದಾರೆಯೇ ಹೊರತು ಅಭಿವೃದ್ಧಿಗೆ ಕ್ರಮ ವಹಿಸುತ್ತಿಲ್ಲ ಎಂದು ಜನರು ಬೇಸರ ವ್ಯಕ್ತಪಡಿಸುತ್ತಾರೆ.
ಬದುಕಿಗಾಗಿ ಹೈನೋದ್ಯಮ: ಮಳೆಯಾಶ್ರಿತ ಭೂಮಿ ಹೊಂದಿರುವ ಇಲ್ಲಿನ ರೈತರ ಜಮೀನುಗಳಿಗೆ ವಿವಿಧ ಏತ ನೀರಾವರಿ ಮೂಲಕ ನೀರುಣಿಸುವ ಯೋಜನೆಗಳು ಅನುಷ್ಠಾನಗೊಂಡಿದ್ದರೂ ಸಮಪರ್ಕವಾಗಿ ಕಾರ್ಯನಿರ್ವಹಿಸದೆ ವಿಫಲವಾಗಿವೆ. ಆದ್ದರಿಂದ ಬಹುಪಾಲು ರೈತರು ಕೊಳವೆ ಬಾವಿಗಳನ್ನು ಅವಲಂಬಿಸಿ ಬೆಳೆಗಳನ್ನು ಬಿತ್ತಿ ಫಸಲು ತೆಗೆಯಬೇಕಿದೆ. ಇಲ್ಲಿನ ಜನರು ಜೀವನೋಪಾಯಕ್ಕಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ದಿನವಹಿ ಈ ಗ್ರಾಮದಿಂದ 1000 ಲೀಟರ್‌ಗೂ ಅಧಿಕ ಗುಣಮಟ್ಟದ ಹಾಲನ್ನು ಮಂಡ್ಯ ಹಾಲು ಒಕ್ಕೂಟಕ್ಕೆ ಪೂರೈಕೆಯಾಗುತ್ತಿದೆ.
ನರೇಗಾ ಸದ್ಬಳಕೆಯಲ್ಲಿ ವಿಫಲ: ಗ್ರಾಮದಲ್ಲಿ ನರೇಗಾ ಯೋಜನೆ ಬಳಸಿಕೊಂಡು ಕೆರೆಕಟ್ಟೆ ಅಭಿವೃದ್ಧಿಪಡಿಸಿಕೊಳ್ಳಲು ಅವಕಾಶಗಳಿದ್ದರೂ ಜನಪ್ರತಿಧಿಗಳು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಗ್ರಾಮದ ಯುವಕರು ಆರೋಪಿಸುತ್ತಾರೆ. ಗ್ರಾಮದ ಮುಂಭಾಗವೇ ಇರುವ ಸಣ್ಣೇಕಟ್ಟೆಯಲ್ಲಿ ಈ ಹಿಂದೆ ಮಳೆ ನೀರು ಶೇಖರಣೆಯಾಗಿ ಜಾನುವಾರುಗಳಿಗೆ ಕುಡಿಯಲು ಹಾಗೂ ಸ್ವಚ್ಛತೆ ಕಾರ್ಯಕ್ಕೆ ಬಳಕೆಯಾಗುತ್ತಿತ್ತು. ಆದರೀಗ ಕಿರುನಾಲೆಗಳು ಒತ್ತುವರಿಯಾಗಿ ಮುಚ್ಚಿಹೋಗಿರುವ ಪರಿಣಾಮ ಕೆರೆ ಬತ್ತಿಹೋಗಿದೆ. ಕೆಲವು ಬಡಾವಣೊಳಚೆ ನೀರು ಕೆರೆ ಸೇರುತ್ತಿರುವುದರ ಜತೆಗೆ ಮದ್ಯ ವ್ಯಸನಿಗಳು ಕುಡಿದು ಖಾಲಿ ಪ್ಯಾಕೇಟ್‌ಗಳನ್ನು ಬಿಸಾಡುವ ಸ್ಥಳವಾಗಿ ಪರಿವರ್ತನೆಗೊಂಡಿದೆ.
ಗ್ರಾಮದ ಸಮಸ್ಯೆಗೆ ಪ್ರತಿಕ್ರಿಯಿಸಿದ ಶಾಸಕ ಡಾ.ಕೆ.ಅನ್ನದಾನಿ, ರಾವಣಿ ಗ್ರಾಮದಲ್ಲಿ ಹಲವು ಬೀದಿಗಳಿಗೆ ಕಾಂಕ್ರೀಟ್ ರಸ್ತೆ ವಾಡಿಸಲಾಗಿದೆ. ಕೋವಿಡ್ ಕಾರಣದಿಂದ ಅನುದಾನದ ಕೊರತೆಯಾಗಿ ರಸ್ತೆ ವಾಡಿಸಲು ವಿಳಂಬವಾಗಿದೆ. ಗ್ರಾಮದ ಮುಖ್ಯರಸ್ತೆ ಡಾಂಬರೀಕರಣಕ್ಕೆ ಕೆಲವೇ ದಿನಗಳಲ್ಲಿ ಕ್ರಮ ವಹಿಸಲಾಗುವುದು ಎಂದರು.