ಸಣ್ಣುವಂಡ ಕಿಶೋರ್ ನಾಚಪ್ಪ ಗೋಣಿಕೊಪ್ಪ
ಅರ‌್ವತೊಕ್ಲು ಗ್ರಾಮ ಪಂಚಾಯಿತಿಗೆ ಒಳಪಡುವ ಹಳ್ಳಿಗಟ್ಟು ಗ್ರಾಮಕ್ಕೆ ರಸ್ತೆ ಸಮಸ್ಯೆಯದ್ದೆ ದೊಡ್ಡ ಸವಾಲಾಗಿದೆ.
ಹಲವು ವರ್ಷಗಳಿಂದ ಡಾಂಬರು ಕಂಡಿರುವ ರಸ್ತೆಗಳು ಕಿತ್ತು ಬಂದಿರುವುದು ವಾಹನದಲ್ಲಿ ತೆರಳಲು ಆಗದಷ್ಟು ಸಮಸ್ಯೆಯಾಗಿದೆ. ನೂರಾರು ಕುಟುಂಬಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿಯಾಗಬೇಕಿದೆ. ಸೇತುವೆ ನಿರ್ಮಾಣ, ಚೆಕ್ ಡ್ಯಾಂ ನಿರ್ಮಾಣವಾಗಬೇಕೆಂಬ ಕೂಗು ಇದೆ. ಕಾಡು ಹಂದಿ ಕಾಟದಿಂದ ಕೃಷಿಕನಿಗೆ ನಷ್ಟದ ಪ್ರಮಾಣ ಹೆಚ್ಚಾಗುತ್ತಿದೆ.
ಕಿತ್ತು ಹೋಗಿರುವ ವಿಷ್ಣುಮೂರ್ತಿ ದೇವಸ್ಥಾನ ರಸ್ತೆ: ಹಳ್ಳಿಗಟ್ಟು ಗ್ರಾಮದ ವಿಷ್ಣುಮೂರ್ತಿ, ಜ್ಞಾನ ನರಸಿಂಹ ದೇವಸ್ಥಾನಕ್ಕೆ ತೆರಳುವ ರಸ್ತೆ ಕಿತ್ತು ಹೋಗಿರುವುದರಿಂದ ಸಂಚರಿಸುವುದು ಕಷ್ಟಕರವಾಗಿದೆ. ಲಾರಿ ಓಡಾಟ ಹೆಚ್ಚಾಗಿದ್ದ ಕಾರಣ, ಡಾಂಬರು ಕಿತ್ತು ಹೋಗಿದ್ದು, ೬ ವರ್ಷಗಳಿಂದ ಸ್ಥಳಿಯರಿಗೆ ದೊಡ್ಡ ಸಮಸ್ಯೆಯಾಗಿದೆ. ಇತ್ತ ಕಾಲನಿ ಕೂಡ ಇದೆ. ಕಾಫಿ ಬೆಳೆಗಾರರು ರಸ್ತೆಯನ್ನೇ ಅವಲಂಭಿಸಿದ್ದಾರೆ.
ಸಾಕಷ್ಟು ಒತ್ತಡ ಹಾಕಿದರೂ ಪ್ರಯೋಜನವಾಗುತ್ತಿಲ್ಲ. ಈ ರಸ್ತೆಯ ಒಂದು ಬದಿ ಅರ‌್ವತೊಕ್ಲು ಗ್ರಾಮ ಪಂಚಾಯಿತಿ, ಮತ್ತೊಂದು ಬದಿ ಹಾತೂರು ಗ್ರಾಮ ಪಂಚಾಯಿತಿಗೆ ಸೇರುತ್ತದೆ. ಇದರಿಂದಾಗಿ ಸ್ಥಳೀಯ ಅಡಳಿತ ಕೂಡ ಗೊಂದಲದಲ್ಲಿದೆ. ಪಂಚಾಯಿತಿ ಮಟ್ಟದ ಜನಪ್ರತಿನಿಧಿಗಳು ರಸ್ತೆ ಅಭಿವೃದ್ಧಿಗೆ ಮನಸು ಮಾಡುತ್ತಿಲ್ಲ. ಸರ್ಕಾರವನ್ನು ಒತ್ತಾಯ ಮಾಡಲು ಜನ ಪ್ರತಿನಿಧಿಗಳಿಲ್ಲದೆ ತೊಳಲಾಡುವಂತಾಗಿದೆ. ಇತ್ತ ದೇವಸ್ಥಾನಗಳ ಭಕ್ತರು ಕೂಡ ತೆರಳಲು ಹಿಂದೇಟು ಹಾಕುವ ಸ್ಥಿತಿ ಇದೆ. ಭದ್ರಕಾಳಿ ರಸ್ತೆ ಕೂಡ ಡಾಂಬರು ಕಿತ್ತು ಹೋಗಿದೆ. ಸುಮಾರು ೩ ಕಿ.ಮೀ. ರಸ್ತೆಗೆ ಕಾಯಕಲ್ಪ ಆಗಬೇಕಿದೆ. ಗ್ರಾಮಾಂತರ ರಸ್ತೆಯನ್ನು ಕೃಷಿಕರು ಹೆಚ್ಚು ಅನುಭವಿಸುತ್ತಿದ್ದಾರೆ. ಆದರೆ, ರಸ್ತೆ ಅವ್ಯವಸ್ಥೆ ಸಂಕಷ್ಟ ಎದುರಿಸುವಂತಾಗಿದೆ.
ಬೇಕಿದೆ ಸೇತುವೆ, ಚೆಕ್ ಡ್ಯಾಂ: ಕುಂದ ರಸ್ತೆಯಿಂದ ಬೀರಂಪಾರೆ ಮೂಲಕ ಹಳ್ಳಿಗಟ್ಟು-ಜೋಡುಬೀಟಿ ಲಿಂಕ್ ರಸ್ತೆಗೆ ಅಡ್ಡಲಾಗಿರುವ ಮಾಂದೋಡ್‌ಗೆ ಸೇತುವೆ ನಿರ್ಮಿಸಬೇಕಿದೆ. ಇದರಿಂದ ಹಳ್ಲಿಗಟ್ಟು ಭದ್ರಕಾಳಿ ದೇವಸ್ಥಾನ ರಸ್ತೆ ಮೂಲಕ ತೆರಳುವವವರಿಗೆ ೫ ಕಿ.ಮೀ. ರಸ್ತೆಯ ಪ್ರಯಾಣ ಕಡಿಮೆಯಾಗಲಿದೆ. ೨ ಕಿ. ಮೀ. ಮಾತ್ರ ಪ್ರಯಾಣ ಮಾಡಿದರೆ ಸಾಕು ಎನ್ನುತ್ತಾರೆ ಸ್ಥಳೀಯರು. ಸುಮಾರು ೧೦೦ ಕ್ಕೂ ಹೆಚ್ಚು ಕುಟುಂಬಗಳಿಗೆ ಈ ರಸ್ತೆ ಪ್ರಯೋಜನವಾಗಲಿದೆ. ಈಗಾಗಲೇ ಶಾಸಕರ ನಿಧಿಯಿಂದ ಶೇ. ೩೦ ರಷ್ಟು ರಸ್ತೆ ಅಭಿವೃದ್ದಿಯಾಗಿದ್ದು, ಉಳಿದ ಭಾಗಕ್ಕೆ ಅನುದಾನ ಕಲ್ಪಿಸಬೇಕಿದೆ.
ಮಾಂದೋಡ್ ಎಂಬ ತೋಡು ಭತ್ತ ಬೆಳೆಯುವ ಗದ್ದೆಯ ಕೆಳಭಾಗದಲ್ಲಿದೆ. ಗದ್ದೆ ಗರ್ಭಾವಸ್ಥೆಗೆ ಬರುವ ಸಂದರ್ಭ ಮಳೆ ಕ್ಷೀಣಿಸುವುದರಿಂದ ಗದ್ದೆಗೆ ನೀರಿನ ಅಭಾವ ಹೆಚ್ಚಾಗುತ್ತಿದೆ. ಇದರಿಂದಾಗಿ ೧೦ಕ್ಕೂ ಹೆಚ್ಚು ಕೃಷಿಕ ಕುಟುಂಬ ತೋಡಿನಿಂದ ನೀರೆತ್ತುವ ಯಂತ್ರದಿಂದ ಗದ್ದೆಗೆ ನೀರು ಹಾಯಿಸುವುದರಿಂದ ಆರ್ಥಿಕವಾಗಿ ನಷ್ಟ ಹೆಚ್ಚು. ನೀರಿಲ್ಲದೆ ಪೊಳ್ಳು ಭತ್ತ ಹೆಚ್ಚಾಗುವುದರಿಂದ ಫಸಲ ನಷ್ಟ ಕೂಡ ಸಮಸ್ಯೆಯಾಗುತ್ತಿದೆ. ಇದರಿಂದಾಗಿ ಇಲ್ಲಿ ಚೆಕ್ ಡ್ಯಾಂ, ನೀರೆತ್ತುವ ವ್ಯವಸ್ಥೆ ಮಾಡಿದರೆ ಕೃಷಿಕರಿಗೆ ಪ್ರಯೋಜನವಾಗುತ್ತದೆ.
ಕಾಡು ಹಂದಿ ಉಪಟಳ: ಕೃಷಿಕ ವರ್ಗ ಹೆಚ್ಚಿರುವ ಗ್ರಾಮದಲ್ಲಿ ಕಾಡು ಹಂದಿಯಿಂದ ಬೆಳೆ ನಷ್ಟ ಹೆಚ್ಚು. ಗದ್ದೆಯಲ್ಲಿ ಉಳುವುದರಿಂದ ಫಸಲು ನಷ್ಟ, ಬೆಳೆ ನಷ್ಟ ಹೆಚ್ಚು. ಭತ್ತ ಉತ್ಪಾದನೆ ವೆಚ್ಚ ಹೆಚ್ಚಾಗುತ್ತಿರುವ ಕಾರಣ ಭತ್ತ ಕೃಷಿಯಿಂದ ದೂರ ಉಳಿಯುತ್ತಿರುವ ಕೃಷಿಕರಿಗೆ ಮತ್ತಷ್ಟು ತೊಂದರೆಯಾಗುತ್ತಿದೆ. ಪರಿಹಾರ ಕೂಡ ಕೇಳಲು ಆಗುತ್ತಿಲ್ಲ. ಭತ್ತ ಕೃಷಿಯಿಂದ ಹಿಂದೇಟು ಹಾಕುವುದರಿಂದ ಅಕ್ಕಿ ಖರೀದಿ ಮಾಡುವ ಅನಿವಾರ್ಯತೆ ಎದುರಾಗಿದೆ.
೧೦ ಸಾವಿರ ಜನಸಂಖ್ಯೆ: ಪೊನ್ನಂಪೇಟೆ ಮುಖ್ಯ ರಸ್ತೆಯವರೆಗೆ ಹಳ್ಳಿಗಟ್ಟು ಗ್ರಾಮದ ಒಂದಷ್ಟು ಪ್ರದೇಶ ಒಳಪಡುವುದರಿಂದ ಪಟ್ಟಣ ವ್ಯಾಪ್ತಿಯಲ್ಲಿ ಜನಸಂಖ್ಯೆ ಇದೆ. ಸುಮಾರು ೧೦ ಸಾವಿರ ಜನಸಂಖ್ಯೆ ಹೊಂದಿದೆ. ಕಾಲನಿ ಕೂಡ ಇದೆ. ಒಳ ರಸ್ತೆ, ಚರಂಡಿ ಸಮಸ್ಯೆ ಕೂಡ ಇದೆ.
ಮಾಂದೋಡ್‌ಗೆ ಸೇತುವೆ ನಿರ್ಮಿಸುವುದರಿಂದ ಹೆಚ್ಚು ಪ್ರಯೋಜನವಾಗಲಿದೆ. ಹಿಂದೆ ಇದೇ ಮಾರ್ಗವಾಗಿ ಬಿ.ಶೆಟ್ಟಿಗೇರಿ ಮೂಲಕ ಬರುವವರು ಗೋಣಿಕೊಪ್ಪ, ಪೊನ್ನಂಪೇಟೆಗೆ ತೆರಳುತ್ತಿದ್ದರು. ಈಗ ರಸ್ತೆ ಇದ್ದರೂ ಕೂಡ, ಸೇತುವೆ ಇಲ್ಲದೆ ಸಂಪರ್ಕ ಕಡಿತಗೊಂಡಿದೆ. ಇಲ್ಲಿ ಸೇತುವೆ ನಿಮಾರ್ಣವಾಗಲಿ.
-ರಾಜಾ ಚಂದ್ರಶೇಖರ್, ಗ್ರಾಮಸ್ಥರು
ವಿಷ್ಣುಮೂರ್ತಿ ದೇವಸ್ಥಾನ ರಸ್ತೆ ಅವ್ಯವಸ್ಥೆಯಿಂದ ನಾವು ದೇವಸ್ಥಾನ, ಬಲ್ಯಮನೆಗೆ ಹೋಗಲು ಹಿಂದೇಟು ಹಾಕುತ್ತಿದ್ದೇವೆ. ಬಲ್ಯಮನೆಯಲ್ಲಿ ದೀಪ ಹಚ್ಚಲು ಹಿರಿಯ ಮಹಿಳೆಯರು ಹೋಗಬೇಕು. ಆದರೆ, ಹಿರಿಯರಿಗೆ ಈ ದಾರಿಯಲ್ಲಿ ತೆರಳು ಆಗುತ್ತಿಲ್ಲ. ಅಧಿಕಾರಿ, ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ. ಎಲ್ಲರಿಗೂ ಪ್ರಯೋಜನವಾಗುವಂತೆ ರಸ್ತೆ ಡಾಂಬರು ಕಾಮಗಾರಿ ನಡೆಸಲಿ.
-ಅಚ್ಚಿಯಂಡ ದೇವಕ್ಕಿ ಬೋಸು, ಗ್ರಾಮಸ್ಥರು
ಹೆಚ್ಚು ಮಳೆ ಬೀಳುವ ಗ್ರಾಮವಾಗಿರುವುದರಿಂದ ರಸ್ತೆಯಲ್ಲಿ ನಡೆದುಕೊಂಡು ಹೋಗಲು ಕಷ್ಟ. ವಾಹನದಲ್ಲಿಯೇ ತೆರಳಬೇಕಿದೆ. ಕೃಷಿಕರಿಗೆ ಹೆಚ್ಚು ಸಮಸ್ಯೆಯಾಗುತ್ತಿದೆ. ಬೆಳೆ ಸಾಗಿಸುವಷ್ಟು ರಸ್ತೆ ಸುಸ್ಥಿತಿಯಲ್ಲಿಲ್ಲ.
-ಮನೆಯಪಂಡ ಗಣಪತಿ, ಗ್ರಾಮದ ಕೃಷಿಕರು