ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಾಲ್ವರು ಸೋಂಕಿತರು ಗುಣಮುಖರಾದ ಬೆನ್ನಲ್ಲೇ ಮಂಗಳವಾರ ಮತ್ತೊರ್ವ ವ್ಯಕ್ತಿಯ ರಿಪೋರ್ಟ್ ನೆಗೆಟಿವ್ ಬಂದಿದೆ. ಅಲ್ಲಿಗೆ ಗ್ರಾಮಾಂತರ ಜಿಲ್ಲೆಯಲ್ಲಿ ಪತ್ತೆಯಾಗಿದ್ದ ಐದಕ್ಕೆ ಐದೂ ಪ್ರಕರಣಗಳಲ್ಲಿ ಸೋಂಕಿತರು ಮಾರಣಾಂತಿಕ ಕರೊನಾ ಬಾಹುವಿನಿಂದ ಬಿಡಿಸಿಕೊಂಡಂತಾಗಿದೆ.
ದೊಡ್ಡಬಳ್ಳಾಪುರ ತಾಲೂಕು ಮಧುರೆ ಹೋಬಳಿ ಕೋಡಿಪಾಳ್ಯದ ಕರೊನಾ ಸೋಂಕಿತ ವ್ಯಕ್ತಿಯೊಬ್ಬರ ವೈದ್ಯಕೀಯ ವರದಿ ಮಂಗಳವಾರ ನೆಗಟಿವ್ ಬಂದಿರುವ ಬಗ್ಗೆ ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅಧಿಕೃತ ೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಾಂತರ ಜಿಲ್ಲೆಯನ್ನು ಕಾಡುತ್ತಿದ್ದ ಕರೊನಾತಂಕ ದೂರವಾದಂತಾಗಿದೆ.
ಹೊಸಕೋಟೆ 4 ಪ್ರಕರಣ ನೆಗೆಟಿವ್: ದಿಲ್ಲಿಯ ನಿಜಾಮುದ್ದಿನ್ ಸಭೆಯಲ್ಲಿ ಭಾಗಿಯಾಗಿದ್ದ ಹೊಸಕೋಟೆ ತಾಲೂಕು ಬೈಲನರಸಾಪುರದ ನಾಲ್ವರಲ್ಲಿ ಕರೊನಾ ಸೋಂಕು ಪತ್ತೆಯಾಗುವ ಮೂಲಕ ಗ್ರಾಮಾಂತರ ಜಿಲ್ಲೆಯಲ್ಲಿ ಮೊದಲ ಕರೊನಾ ಪ್ರಕರಣ ಬೆಳಕಿಗೆ ಬಂದಿದ್ದವು. ಮತ್ತೆ ಏ.13ರಂದು ದೊಡ್ಡಬಳ್ಳಾಪುರದ ಕೋಡಿಪಾಳ್ಯದ ವ್ಯಕ್ತಿಯೊಬ್ಬರಿಗೆ ಕರೊನಾ ಸೋಂಕು ತಗುಲಿರುವುದು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಐದಕ್ಕೇರಿತ್ತು. ಪ್ರಸ್ತುತ ಹೊಸಕೋಟೆ ಹಾಗೂ ದೊಡ್ಡಬಳ್ಳಾಪುರ ಎರಡೂ ತಾಲೂಕಿನ ಸೋಂಕಿತರು ಗುಣಮುಖರಾಗಿದ್ದು, ಜಿಲ್ಲೆ ಕಿತ್ತಳೆ ವಲಯದಿಂದ ಹಸಿರು ವಲಯದ ಕಡೆಗೆ ತೆರೆದುಕೊಳ್ಳುತ್ತಿದೆ.
ಜಿಲ್ಲಾಡಳಿತದ ಕಟ್ಟುನಿಟ್ಟು ಪಾಲನೆ: ಜಿಲ್ಲಾ ವ್ಯಾಪ್ತಿಯ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದಾಗಿ ಮೊದಲಿಗೆ ಜಿಲ್ಲೆಯಲ್ಲಿ ಕರೊನಾತಂಕ ತೀವ್ರತೆ ಪಡೆದಿತ್ತು. ಜಿಲ್ಲಾಡಳಿತವೇ ಏರ್‌ಪೋರ್ಟ್‌ನತ್ತ ಎಚ್ಚರಿಕೆಯ ಕಣ್ಣಿಟ್ಟಿತ್ತು. ಲಾಕ್‌ಡೌನ್ ೋಷಣೆಯಾಗುತ್ತಿದ್ದಂತೆ ಏರ್‌ಪೋರ್ಟ್‌ಗೆ ಕಾಲಿಟ್ಟ ಪ್ರತಿ ಪ್ರಯಾಣಿಕರಿಗೂ ಸ್ಕ್ರೀನಿಂಗ್ ನಡೆಸಿ, ಸೋಂಕಿತರನ್ನು ಕ್ವಾರಂಟೈನ್ ಮಾಡುವ ಮೂಲಕ ಮೊದಲ ಜಯ ಸಾಧಿಸಿತ್ತು. ಜಿಲ್ಲೆಯಲ್ಲಿ ಇನ್ನೇನು ಯಾವುದೇ ಕರೊನಾ ಆತಂಕವಿಲ್ಲ ಎನ್ನುವಷ್ಟರಲ್ಲಿ ಬೈಲನರಸಾಪುರದಲ್ಲಿ ನಾಲ್ವರಿಗೆ ಸೋಂಕು ಬೆಳಕಿಗೆ ಬಂದು ಜಿಲ್ಲೆಯನ್ನೇ ನಡುಗಿಸಿತ್ತು.
ಎಚ್ಚೆತ್ತ ಜಿಲ್ಲಾಡಳಿತ ಕೂಡಲೇ ಇಡೀ ಗ್ರಾಮವನ್ನು ಸೀಲ್‌ಡೌನ್ ಮಾಡಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರ ಲವಾಗಿ ಕರೊನಾ ಸೋಂಕಿನ ಸರಪಳಿ ತುಂಡಾಗಲು ಕಾರಣವಾಯಿತು. ತುಸು ನಿರಾಳತೆ ಅನುಭವಿಸುತ್ತಿದೆ ಎನ್ನುವಷ್ಟರಲ್ಲೇ ದೊಡ್ಡಬಳ್ಳಾಪುರದ ಕೋಡಿಪಾಳ್ಯದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದು ಜಿಲ್ಲಾಡಳಿತದ ನಿದ್ರೆಗೆಡಿಸಿತ್ತು. ತಕ್ಷಣ ಆ ಗ್ರಾಮವನ್ನು ಸೀಲ್‌ಡೌನ್ ಮಾಡಿ ಸಮರೋಪಾದಿಯಲ್ಲಿ ಕರೊನಾ ನಿಯಂತ್ರಣಕ್ಕೆ ಶ್ರಮಿಸಲಾಯಿತು. ಪ್ರಸ್ತುತ ಎರಡೂ ತಾಲೂಕುಗಳ ಸೋಂಕಿತರು ಗುಣಮುಖರಾಗುವ ಮೂಲಕ ಗ್ರಾಮಾಂತರ ಜಿಲ್ಲೆ ಕರೊನಾಮುಕ್ತ ಜಿಲ್ಲೆಯಾಗುವತ್ತ ಬಿರುಸಿನ ಹೆಜ್ಜೆ ಇಟ್ಟಿದೆ.
ನಗರ ಪ್ರವೇಶ ನಿಷೇಧ: ಗ್ರಾಮಾಂತರ ಜಿಲ್ಲೆ ರಾಜ್ಯ ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಂತೆ ಇರುವುದರಿಂದ ಕರೊನಾತಂಕ ಎದುರಿಸುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು, ನಗರ ವಾಸಿಗಳ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ತುರ್ತು ಸೇವೆ ಹೊರತುಪಡಿಸಿ ಇನ್ಯಾವುದೇ ಸಡಿಲಿಕೆಗೆ ಅವಕಾಶ ನೀಡಿಲ್ಲ. ಮತ್ತಷ್ಟು ದಿನ ಇದೇ ಬಿಗಿ ಲಾಕ್‌ಡೌನ್ ಮುಂದುವರಿಸುವ ಮೂಲಕ ಜಿಲ್ಲೆಯನ್ನು ಕರೊನಾತಂಕದಿಂದ ದೂರಮಾಡುವ ಪಣ ತೊಟ್ಟಿದೆ.
ಗ್ರಾಮಾಂತರ ಜಿಲ್ಲೆ ನಗರಕ್ಕೆ ಹತ್ತಿರುವಿರುವುದರಿಂದ ನಾವು ಎಚ್ಚರಿಕೆ ವಹಿಸಲೇಬೇಕು. ಪ್ರಸ್ತುತ ಜಿಲ್ಲೆಯಲ್ಲಿ ಕಂಡುಬಂದಿದ್ದ ಐದು ಕರೊನಾ ಪ್ರಕರಣಗಳಲ್ಲಿ ಐವರೂ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಸೋಂಕು ಹರಡದಂತೆ ಮತ್ತಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ ಬೆಂ.ಗ್ರಾಮಾಂತರ