ಜಿಲ್ಲೆ

ಗ್ರಾಪಂ ಕಾರ್ಯದರ್ಶಿ ಮೇಲೆ ಕ್ರಮ ಆಗಲಿ

ಪ್ರಶಾಂತ ಹೂಗಾರ

ಹುಕ್ಕೇರಿ: ತಾಲೂಕಿನ ಮದಿಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹಾಗೂ ಪಂಚಾಯಿತಿ ಪ್ರಭಾರ ಅಭಿವೃದ್ಧಿ ಅಧಿಕಾರಿ ಸುರೇಶ ತಳವಾರ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಜನಸಾಮಾನ್ಯರ ಕೆಲಸಕ್ಕೆ ಹಣ ಪಡೆಯುತ್ತಿದ್ದಾರೆ. ಪಂಚಾಯಿತಿಯಿಂದ ಸಾಮಗ್ರಿ ಖರೀದಿಯಲ್ಲಿ ಗೋಲ್‌ಮಾಲ್ ಮಾಡುತ್ತಿದ್ದಾರೆ. ಆದ್ದರಿಂದ ತಕ್ಷಣ ಅವರನ್ನು ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿ ಗ್ರಾಪಂ ಅಧ್ಯಕ್ಷರು ತಾಪಂ ಇಒ ಟಿ.ಆರ್.ಮಲ್ಲಾಡದ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಇವರು ಇತ್ತೀಚೆಗೆ ಪಂಚಾಯಿತಿಯಿಂದ ಸಾಮಗ್ರಿ ಖರೀದಿ ವಿಷಯದಲ್ಲಿ ಪಂಚಾಯಿತಿ ಪದಾಧಿಕಾರಿಗಳ ಗಮನಕ್ಕೆ ತರದೆ ತಾವೇ ಖರೀದಿಸಿ ಬೇಕಾ ಬಿಟ್ಟಿ ಬಿಲ್ ತಗೆಯುತ್ತಿದ್ದಾರೆ. ಗ್ರಾಮಸ್ಥರು ಪಂಚಾಯಿತಿ ಕಾರ್ಯಗಳಿಗೆ ಬಂದಾಗ ಅವರಿಗೆ ಇಲ್ಲ ಸಲ್ಲದ ವಿಷಯ ಹೇಳುತ್ತಿದ್ದಾರೆ. ಸದಸ್ಯರು ಹಾಗೂ ಗ್ರಾಮಸ್ಥರಿಗೆ ಕಿಂಚಿತ್ತೂ ಗೌರವ ನೀಡುತ್ತಿಲ್ಲ. ಹಾಗಾಗಿ ತಕ್ಷಣ ವರ್ಗಾವಣೆ ಮಾಡಿ, ಪಂಚಾಯಿತಿಯಿಂದಾದ ಸಾಮಗ್ರಿ ಖರೀದಿಯ ಸಂಪೂರ್ಣ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.

ಪಂಚಾಯಿತಿ ಅಧ್ಯಕ್ಷೆ ಲಕ್ಕವ್ವ ಬಾಗಿ, ಶೋಭಾ ಖಾನಾಪೂರಿ, ಶಿವಾಜಿ ಗಾಡಿವಡ್ಡರ, ಹಸನ್ ಸನದಿ, ರವೀಂದ್ರ ಚೌಗಲಾ, ದಾನಮ್ಮ ಅಲಗೂರಿ, ಶ್ರೀಧರ ಖಾನಾಪುರಿ, ಕಾಶೀನಾಥ ಮುತಗಿ ಇತರರಿದ್ದರು.