ಉಡುಪಿ: ಕಾರ್ಯಕರ್ತರನ್ನು ನಾಯಕರಾಗಿ ರೂಪಿಸುವ ಆಶಯದಲ್ಲಿ ಗ್ರಾಪಂ ಚುನಾವಣೆ ಎದುರಿಸಲಾಗುತ್ತಿದೆ. ಪಂಚಾಯಿತಿ ಚುನಾವಣೆ ನಾಯಕರನ್ನು ರೂಪಿಸುವ ಕ್ಷೇತ್ರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅಂಬಾಗಿಲುವಿನಲ್ಲಿ ಶುಕ್ರವಾರ ಬಿಜೆಪಿ ಉಡುಪಿ ನಗರ, ಕಾಪು, ಕಾರ್ಕಳ ವ್ಯಾಪ್ತಿಯ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆ ಕಾಂಗ್ರೆಸ್ ಮುಕ್ತವಾಗಿದೆ. ಗ್ರಾಮ ಸ್ವರಾಜ್ಯ ಅಭಿಯಾನ ಮೂಲಕ ಶೇ. 80ರಷ್ಟು ಗ್ರಾಪಂ ಗೆಲ್ಲಲು ನಿರ್ಧರಿಸಲಾಗಿದೆ. ಇದಕ್ಕಾಗಿ 3 ತಿಂಗಳ ಹಿಂದಿನಿಂದ ತಯಾರಿ ನಡೆಸಿ ಪಂಚ ಸೂತ್ರ ರೂಪಿಸಲಾಗಿದೆ ಎಂದರು.
ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಕೋಲಾರ ಸಂಸದ ಮುನಿಸ್ವಾಮಿ, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ, ಉಡುಪಿ ಬಿಜೆಪಿ ಪ್ರಭಾರಿ, ಶಾಸಕ ಉಮಾನಾಥ ಕೋಟ್ಯಾನ್, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ್ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಯಶ್ಪಾಲ್ ಸುವರ್ಣ ಉಪಸ್ಥಿತರಿದ್ದರು.
ಕಾಂಗ್ರೆಸ್ ಕೊಡುಗೆ ಶೂನ್ಯ
ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ್ ಮಾತನಾಡಿ, ಅಧಿಕಾರಕ್ಕೆ ಅಂಟಿಕೊಂಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಕೊಟ್ಟ ಕೊಡುಗೆ ಶೂನ್ಯ. ಆದರೆ, ಒಂದೂವರೆ ವರ್ಷದಲ್ಲಿ ಬಿಜೆಪಿ ಸರ್ಕಾರ ಈ ಕ್ಷೇತ್ರಕ್ಕೆ ಅತಿ ಹೆಚ್ಚು ಅನುದಾನ ಒದಗಿಸಿದೆ. ಪರಸ್ಪರ ಪ್ರಗತಿಯಲ್ಲಿ ನಗರ-ಗ್ರಾಮಗಳ ನಡುವೆ ನ್ಯಾಯಯುತ ಸಮಾನತೆ ಇರಬೇಕು. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರಗಳು ಇಂಥ ಅಭಿವೃದ್ಧಿ ಕಡೆಗಣಿಸಿ ಜನರನ್ನು ವಂಚಿಸಿವೆ. ಬಿಜೆಪಿ ಸರ್ಕಾರ ಈ ಅನ್ಯಾಯ ಸರಿಪಡಿಸಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದೆ ಎಂದರು.