ಜಿಲ್ಲೆ

ಯುವಜನತೆಯಲ್ಲಿ ಬೆಳೆಯಲಿ ಸಾಹಿತ್ಯಾಸಕ್ತಿ : ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಆಶಯ

ಸೌಮ್ಯ ಆರ್

ಪುತ್ತೂರು ಗ್ರಾಮಾಂತರ: ಯುವಜನತೆಯನ್ನು ಸಾಹಿತ್ಯ ಕ್ಷೇತ್ರಕ್ಕೆ ಬರಮಾಡಿಕೊಂಡು ಸಾಹಿತ್ಯಾಭಿರುಚಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಗ್ರಾಮ ಸಾಹಿತ್ಯ ಸಂಭ್ರಮ ಶ್ಲಾಘನೀಯ ಕಾರ್ಯವಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಅಭಿಪ್ರಾಯಪಟ್ಟರು.

ನರಿಮೊಗರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಸಾಪ ಪುತ್ತೂರು ತಾಲೂಕು ಘಟಕ ನೇತೃತ್ವದಲ್ಲಿ, ನರಿಮೊಗರು ಗ್ರಾಪಂ ಮತ್ತು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗ ಹಾಗೂ ಪುತ್ತೂರು ಚಿಗುರೆಲೆ ಸಾಹಿತ್ಯ ಬಳಗ ಸಂಯೋಜನೆಯಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದ ಅಂಗವಾಗಿ ನಡೆದ, ಗ್ರಾಮ ಸಾಹಿತ್ಯ ಸಂಭ್ರಮ ಸರಣಿ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.

ಕಸಾಪ ಪುತ್ತೂರು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆವಹಿಸಿದ್ದರು. ಸಾಂದೀಪನಿ ವಿದ್ಯಾಸಂಸ್ಥೆಯ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಉದ್ಘಾಟಿಸಿದರು.

ಬಾಲಕವಿಗೋಷ್ಠಿ, ಬಾಲಕಥಾಗೋಷ್ಠಿ, ಪ್ರವಾಸ ಕಥನಗೋಷ್ಠಿ, ಆಪ್ತಮಿತ್ರ ಗೋಷ್ಠಿ ನೆರವೇರಿತು. ಪ್ರಣವ್ ಭಟ್ ಕನ್ನಡದಲ್ಲೂ ಐಎಎಸ್ ಬರೆಯಿರಿ ಅಭಿಯಾನ ಕುರಿತು ಉಪನ್ಯಾಸ ನೀಡಿದರು.

ನರಿಮೊಗರು ಶಾಲೆ ವಿದ್ಯಾರ್ಥಿನಿ ಪೂಜಾಶ್ರೀ ಸರ್ವಾಧ್ಯಕ್ಷತೆ ವಹಿಸಿದ್ದರು. ಸಿಆರ್‌ಪಿ ಪರಮೇಶ್ವರಿ ಪ್ರಸಾದ್, ಎಸ್‌ಡಿಎಂ ಅಧ್ಯಕ್ಷ ಕೃಷ್ಣರಾಜ ಜೈನ್ ಮಾತನಾಡಿದರು. ಕಾರ್ಯಕ್ರಮ ಸಂಚಾಲಕ ನಾರಾಯಣ ಕುಂಬ್ರ ಪ್ರಸ್ತಾಪಿಸಿದರು. ಮುಖ್ಯಶಿಕ್ಷಕಿ ಶ್ರೀಲತಾ ರೈ ಎ. ಸ್ವಾಗತಿಸಿದರು. ಜಗದೀಶ್ ಬಾರಿಕೆ ಮತ್ತು ಸುಪ್ರೀತಾ ಚರಣ್ ಪಾಲಪ್ಪೆ ನಿರೂಪಿಸಿದರು.

ಗ್ರಾಮದ ವಿವಿಧ ಸಾಧಕರಿಗೆ ಸನ್ಮಾನ

ಅವಿನಾಶ್ ಕೊಡಂಕಿರಿ, ಪರೀಕ್ಷಿತ್ ತೋಳ್ಪಾಡಿ, ಯಮುನಾ ಪೂಜಾರಿ, ಸುಧಾಕರ್ ಕುಲಾಲ್, ಸವಿತಾ ಕುಮಾರಿ ಎಂ.ಡಿ, ವಿದ್ವಾನ್ ಗೋಪಾಲಕೃಷ್ಣ, ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ, ಜಯರಾಮ ಕೆದಿಲಾಯ, ಜಯಗುರು ಹಿಂದಾರು, ತಾರಾನಾಥ್ ಪಿ.ಸವಣೂರು ಅವರನ್ನು ಸನ್ಮಾನಿಸಲಾಯಿತು.