ಜಿಲ್ಲೆ

ಸಚಿವ ವೆಂಕಟೇಶ್‌ಗೆ ಕೊಂಬುಡಿಕ್ಕಿ ಗ್ರಾಮಸ್ಥರ ಮನವಿ

ಎ. ಆರ್. ರಘುರಾಮ

ಹನೂರು: ಮನೆಗಳು ಶಿಥಿಲಗೊಂಡಿವೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ಕೆಲವರಿಗೆ ಗೃಹಲಕ್ಷ್ಮೀ ಯೋಜನೆಯಡಿ ಹಣ ಬಂದಿಲ್ಲ. ಅಂಗವಾಡಿ, ಶಾಲಾ ಕಟ್ಟಡ ಶಿಥಿಲಗೊಂಡಿದ್ದು ಸೋರುತ್ತಿದೆ. ಎಪಿಎಲ್ ಕಾರ್ಡಿನಿಂದ ತೊಂದರೆಯಾಗಿದೆ. ಇತ್ತ ಕಾಡು ಪ್ರಾಣಿಗಳ ಕಾಟ. ಆದ್ದರಿಂದ ಈ ಬಗ್ಗೆ ಗಮನಹರಿಸಿ ಸಮಸ್ಯೆಗಳನ್ನು ಬಗೆಹರಿಸಿ…
ಇದು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಕೊಂಬುಡಿಕ್ಕಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ಧ ಕುಂದು ಕೊರತೆ ಸಭೆಯಲ್ಲಿ ಪಶುಸಂಗೋಪನೆ, ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರಿಗೆ ಗ್ರಾಮಸ್ಥರು ಹೇಳಿಕೊಂಡ ಪ್ರಮುಖ ಸಮಸ್ಯೆಗಳು.
ಗ್ರಾಮದಲ್ಲಿ ಆಯೋಜಿಸಿದ್ಧ ಕುಂದುಕೊರತೆ ಸಭೆಯಲ್ಲಿ ಗ್ರಾಮಸ್ಥರು ಮಾತನಾಡಿ, ಗ್ರಾಮದಲ್ಲಿ ಬಹುತೇಕ ಜನರು ಕೂಲಿ ಹಾಗೂ ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸಲಾಗುತ್ತಿದ್ದಾರೆ. ಇಲ್ಲಿನ ಗಿರಿಜನರಿಗೆ ಕಳೆದ 30 ವರ್ಷದ ಹಿಂದೆ ಮನೆ ನಿರ್ಮಿಸಿ ಕೊಟ್ಟಿದ್ದರು. ಅವು ಕಳೆದ ನಾಲ್ಕೈದು ವರ್ಷದಿಂದ ಸಂಪೂರ್ಣ ಶಿಥಿಲಗೊಂಡಿವೆ. ಇದರಿಂದ ಮಳೆ ಬಂದ ವೇಳೆ ನೀರು ಸೋರುತ್ತಿದೆ. ಕಷ್ಟದ ನಡುವೆಯೇ ವಾಸಿಸಬೇಕಿದೆ. ಆದ್ದರಿಂದ ಮನೆ ನಿರ್ಮಿಸಿಕೊಡುವಂತೆ ಮನವಿ ಮಾಡಿದರು.
ಈ ವೇಳೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ ಹಾಗೂ ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಅವರಿಂದ ಮಾಹಿತಿ ಪಡೆದ ಸಚಿವರು, ಗ್ರಾಮ ಮಾತ್ರವಲ್ಲದೇ ತಾಲೂಕಿನ ಗಿರಿಜನರ ಮನೆಗಳ ಸರ್ವೇಕಾರ್ಯ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದರಲ್ಲದೇ ಸರ್ಕಾರದಿಂದ ಮನೆ ಮಂಜೂರಾತಿಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ರಸ್ತೆ ಅಭಿವೃದ್ಧಿಗೆ ಸೂಚನೆ :
ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಎಚ್.ಡಿ ಕುಮಾರಸ್ವಾಮಿ ಅವರು ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ವೇಳೆ ಮ.ಬೆಟ್ಟದ ಮುಖ್ಯ ರಸ್ತೆಯಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿತ್ತು. ಆದರೀಗ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿದೆ. ರಸ್ತೆ ಸಂಪೂರ್ಣ ಹಾಳಾಗಿದೆ. ಇದರಿಂದ ಸಂಚಾರಕ್ಕೆ ತುಂಬಾ ತೊಂದರೆಯನ್ನು ಅನುಭವಿಸಬೇಕಿದೆ. ಗ್ರಾಮಕ್ಕೆ ಒಂದು ಬಸ್ ಮಾತ್ರ ಸಂಚರಿಸುತ್ತಿದೆ. ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳಲು ಸಮಸ್ಯೆಯಾಗಿದೆ. ಆದ್ದರಿಂದ ರಸ್ತೆಯನ್ನು ಅಭಿವೃದ್ಧಿ ಪಡಿಸುವುದರ ಜತೆಗೆ ಹೆಚ್ಚಿನ ಬಸ್ ಸೌಕರ್ಯ ಕಲ್ಪಿಸಿ ಅನುಕೂಲ ಕಲ್ಪಿಸುವಂತೆ ಗ್ರಾಮಸ್ಥರು ಸಚಿವರಲ್ಲಿ ಮನವಿ ಮಾಡಿದರು. ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಪಿಡಬ್ಯುಡಿ ಎಇಇ ಚಿನ್ನಣ್ಣ ಅವರಿಗೆ ಸಚಿವರು ಸೂಚಿಸಿದರು.
ಶಿಕ್ಷಕಿಯಾದ ಜಿಲ್ಲಾಧಿಕಾರಿ:
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಶಿಕ್ಷಕರಿಂದ ಶಾಲೆಯ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷ ಶಾಂತರಾಜು ಶಾಲೆಯ ಆವರಣದಲ್ಲಿರುವ ಬಾವಿಯಿಂದ ಮಕ್ಕಳಿಗೆ ತುಂಬಾ ಸಮಸ್ಯೆಯಾಗಿದೆ. ಆದ್ದರಿಂದ ಬಾವಿಯನ್ನು ಮುಚ್ಚಿಸುವಂತೆ ಮನವಿ ಮಾಡಿದರು. ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಗ್ರಾಪಂ ಪಿಡಿಒ ಕಿರಣ್‌ಕುಮಾರ್‌ಗೆ ಡಿಸಿ ಸೂಚಿಸಿದರು. ಬಳಿಕ ಅಡುಗೆ ಕೋಣೆಗೆ ತೆರಳಿ ಆಹಾರ ಪದಾರ್ಥಗಳ ಗುಣಮಟ್ಟವನ್ನು ಡಿಸಿ ಪರೀಕ್ಷಿಸಿದರು. 7ನೇ ತರಗತಿಗೆ ತೆರಳಿ ಮಕ್ಕಳಿಂದ ಗಣಿತ ಪುಸ್ತಕವನ್ನು ಪಡೆದು ಕಪ್ಪುಹಲಗೆಯ ಮೇಲೆ ಗುಣಾಕಾರವನ್ನು ಬರೆದು ವಿದ್ಯಾರ್ಥಿಗಳಿಂದ ಉತ್ತರ ಪಡೆದರು. ಈ ಮೂಲಕ ಜಿಲ್ಲಾಧಿಕಾರಿ ಸುಮಾರು 10 ನಿಮಿಷಗಳ ಕಾಲ ಶಿಕ್ಷಕಿಯಾಗಿ ಮಕ್ಕಳಿಗೆ ಲೆಕ್ಕವನ್ನು ಹೇಳಿಕೊಟ್ಟರು.