ಜಿಲ್ಲೆ

ಬ್ಯಾಡರಹಳ್ಳಿಲಿ ಬೇಕಾಬಿಟ್ಟಿ ಗ್ರಾಮಸಭೆ

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಗ್ರಾಮಗಳ ಅಭಿವೃದ್ಧಿ, ಗ್ರಾಮಸ್ಥರ ಕುಂದುಕೊರತೆಗಳಿಗೆ ದನಿಯಾಗಬೇಕಾದ ಗ್ರಾಮಸಭೆಗಳು ಇತ್ತೀಚಿನ ದಿನಗಳಲ್ಲಿ ಕಾಟಾಚಾರಕ್ಕೆ ಎನ್ನುವಂತಾಗಿದೆ ಎಂಬ ಆರೋಪ ಸಾಮಾನ್ಯವಾಗಿದೆ, ಇದಕ್ಕೆ ನಿದರ್ಶನ ಎಂಬಂತೆ ವಿಶ್ವನಾಥಪುರ ಗ್ರಾಪಂನ ಬ್ಯಾಡರಹಳ್ಳಿಯಲ್ಲಿ ಸೋಮವಾರದ ಮೊದಲನೇ ಹಂತದ ಗ್ರಾಮಸಭೆ ಬೇಕಾಬಿಟ್ಟಿ ಎಂಬಂತೆ ನಡೆಯಿತು.

ಬೆಳಗ್ಗೆ 11 ಗಂಟೆಗೆ ನಿಗಧಿಯಾಗಿದ್ದ ಗ್ರಾಮಸಭೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಆರಂಭವಾಯಿತು. ಬೆಳಗ್ಗೆಯಿಂದ ಕಾದು ಕುಳಿತಿದ್ದ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು. ಈ ವೇಳೆ ಗ್ರಾಮಸ್ಥರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿಗೂ ಗ್ರಾಮಸಭೆ ವೇದಿಕೆಯಾಯಿತು. ಗ್ರಾಮಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಗೈರು ಹಾಜರಿಯಿಂದ ಗ್ರಾಮಸ್ಥರ ಕುಂದುಕೊರತೆಗಳು ಗಾಳಿಯಲ್ಲಿ ಗುಂಡು ಹೊಡೆದಂತಾಯಿತು ಎಂಬ ಆಕ್ರೋಶ ಕೇಳಿಬಂತು. ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಪ್ರತಿನಿಧಿಸುವ ಕ್ಷೇತ್ರದಲ್ಲೇ ಅಧಿಕಾರಿಗಳ ಉದಾಸೀನತೆ ಹೀಗಾದರೆ ಇನ್ನು ಉಳಿದ ಕಡೆ ಪರಿಸ್ಥಿತಿ ಹೇಗಿರುತ್ತದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.

ಲಂಚಾವತಾರಕ್ಕೆ ಕಡಿವಾಣ ಇಲ್ಲವೇ? ತಾಲೂಕಿನ ಗ್ರಾಮ ಪಂಚಾಯಿತಿಗಳು ಸೇರಿ ಯಾವುದೇ ಸರ್ಕಾರಿ ಕಚೇರಿಗೆ ಹೋದರೂ ಅಧಿಕಾರಿಗಳು ಲಂಚಕ್ಕೆ ಕೈಯೊಡುತ್ತಾರೆ, ಇಪ್ಪನೆರಳೆ ಸೂಪ್ಪಿಗೆ ಸಬ್ಸಿಡಿ ಪರಿಹಾರ ನೀಡದೆ ರೇಷ್ಮೆ ಇಲಾಖೆ ಅಧಿಕಾರಿಗಳು ಅನಗತ್ಯವಾಗಿ ಅಲೆದಾಡಿಸುತ್ತಾರೆ ಎಂದು ಹಲವು ಗ್ರಾಮಸ್ಥರು ಆರೋಪ ವ್ಯಕ್ತಪಡಿಸಿದರು. ಬೇಸಿಗೆ ಸಂದರ್ಭದಲ್ಲಿ ಜನ, ಜಾನುವಾರುಗಳಿಗೆ ನೀರಿನ ತೊಂದರೆ ಎದುರಾಗದಂತೆ ಪಂಚಾಯಿತಿ ಅಗತ್ಯ ಕ್ರಮಕೈಗೊಳ್ಳಬೇಕು. ಆದರೆ ಇಲ್ಲಿವರೆಗೂ ಈ ಬಗ್ಗೆ ಯಾವುದೇ ಪೂರ್ವ ಸಿದ್ದತೆ ಸಭೆ ನಡೆದಿಲ್ಲ ಎಂದು ಸ್ಥಳೀಯರು ದೂರಿದರೆ, ಬೊಮ್ಮವಾರದಲ್ಲಿನ ಸರ್ಕಾರಿ ಜಮೀನು ಕಬಳಿಕೆಗೆ ಭೂಗಳ್ಳರು ನಕಲಿ ದಾಖಲೆಗಳನ್ನು ಸೃಷ್ಟಿಸುವ ಮುನ್ನ ತಂತಿಬೇಲಿ ಅಳವಡಿಸಿ, ಒತ್ತುವರಿಯಾದ ಸರ್ಕಾರಿ ಆಸ್ತಿ ಉಳಿಸಿ ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಕರ್ತವ್ಯಕ್ಕೆ ಅಡ್ಡಿ, ದೌರ್ಜನ್ಯ ಎಂದು ನಮ್ಮ ಮೇಲೆಯೇ ಪ್ರಕರಣ ದಾಖಲಿಸುವ ಹುನ್ನಾರ ಮಾಡುತ್ತಾರೆ ಎಂದು ಬೊಮ್ಮವಾರದ ಜನರು ಅಲವತ್ತುಗೊಂಡರು.

ಅಧಿಕಾರಿಗಳಿಗೆ ತರಾಟೆ: ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಕ ಮಾಡದೆ ಇಷ್ಟಾನುಸಾರ ನೇಮಕ ಮಾಡುವ ಪ್ರಕ್ರಿಯೆಗೆ ಲಗಾಮು ಹಾಕಬೇಕಿದೆ, ಶೆಟ್ಟೇರಹಳ್ಳಿಯಲ್ಲಿ ನಿರ್ಮಿಸಲಾದ ಶುದ್ಧ ನೀರಿನ ಘಟಕ ಉಪಯೋಗಕ್ಕೆ ಬರದಂತಾಗಿದೆ, ಬೀದಿ ದೀಪಗಳ ನಿರ್ವಹಣೆ ಸರಿಯಾಗಿಲ್ಲ, ಸೊಳ್ಳೆಗಳ ನಿಯಂತ್ರಣಕ್ಕೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಡಿಜಿಟಲ್ ಲೈಬ್ರರಿ ವ್ಯವಸ್ಥೆ ಇದೆ, ನಮ್ಮಲ್ಲಿ ಇಲ್ಲಿವರೆಗೂ ಜಾರಿಗೆ ಬಂದಿಲ್ಲ , ಗ್ರಾಮೀಣ ಭಾಗದ ಬಹುತೇಕ ಸರ್ಕಾರಿ ಶಾಲೆಗಳಿಗೆ ಆಟದ ಮೈದಾನಗಳಿಲ್ಲ, ಸಮುದಾಯ ಭವನಗಳು ನಿರ್ವಹಣೆ ಇಲ್ಲದಂತಾಗಿದೆ, ಪಡಿತರ ಪಡೆಯಲು ದೂರದೂರಿಗೆ ಹೋಗುವ ಪರಿಸ್ಥಿತಿ ತಪ್ಪಿಸಿ ಎಂದು ಹಲವು ಗ್ರಾಮಸಭೆಗಳಲ್ಲಿ ಹೇಳಿ ಕೊಂಡಿದ್ದೇವೆ ಇಲ್ಲಿಯವರೆಗೂ ಪ್ರಯೋಜನಕ್ಕೆ ಬಂದಿಲ್ಲ ಹೀಗೆ ಸಾಲು ಸಾಲು ದೂರುಗಳ ಸುರುಮಳೆಗೈದ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.