ಜಿಲ್ಲೆ

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿ ಅಳತೆ, ಕರ ನಿಗದಿಗೆ ಜನರ ಅಸಹಕಾರ

ಬಿಡದಿ: ಸ್ವಸಹಾಯ ಸಂಘದ ಸದಸ್ಯರಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿ ಅಳತೆ ಮಾಡಿ, ಕರ ನಿರ್ಧರಿಸುವ ವಿನೂತನ ಪ್ರಯೋಗಕ್ಕೆ ಜಿಲ್ಲೆಯಲ್ಲಿ ಚುನಾಯಿತ ಪ್ರತಿನಿಧಿಗಳು ಮತ್ತು ಸಾರ್ವಜನಿಕರ ಅಸಹಕಾರ ಎದುರಾಗಿದೆ.

ಇತ್ತೀಚೆಗೆ ರಾಮನಗರ ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ ಅವರ ಆಸಕ್ತಿಯಿಂದ 127 ಗ್ರಾಮ ಪಂಚಾಯಿತಿಗಳಲ್ಲಿ ಸ್ವಸಹಾಯ ಸಂಘಗಳ ಸದಸ್ಯರಲ್ಲಿ ಇಚ್ಛಿಸುವವರನ್ನು ನೇಮಕ ಮಾಡಿಕೊಂಡು ಸ್ವತ್ತುಗಳ ಅಳತೆ ಮಾಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಆಸ್ತಿಗಳನ್ನು ಅಳತೆ ಮಾಡಿ ನಿವೇಶನ, ಹೆಂಚು, ಸೀಟು, ಸಿಮೆಂಟ್ ಛಾವಣಿ ಮಾದರಿ ಆಧರಿಸಿ ಸರ್ಕಾರದ ನಿರ್ದೇಶನದಂತೆ ತೆರಿಗೆ ವಿಧಿಸಲು ಕಾರ್ಯಕ್ರಮ ರೂಪಿಸಲಾಗಿತ್ತು. ಆದರೆ ಈ ಚಿಂತನೆಗೆ ಸ್ಥಳೀಯ ಗ್ರಾಪಂ ಸದಸ್ಯರು, ಸಾರ್ವಜನಿಕರು ಹಾಗೂ ಅಧಿಕಾರಿ ವರ್ಗದಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ.

ಸ್ವ-ಘೋಷಣಾ ಪತ್ರದಲ್ಲೇನಿದೆ: ಕರ ನಿರ್ಧರಿಸುವ ಸಲುವಾಗಿಯೇ ಜಿಲ್ಲೆಯಲ್ಲಿ ಸ್ವ-ಘೋಷಣಾ ವ್ಯವಸ್ಥೆ ಪರಿಚಯಿಸಲಾಗಿದೆ. ಸ್ವತ್ತಿನ ಮಾಲೀಕರ ಹೆಸರು, ಅನುಭವದಾರರ ಹೆಸರು, ಪಂಚತಂತ್ರದ ಪ್ರಕಾರ ಸ್ವತ್ತಿನ ಸಂಖ್ಯೆ, ವಿಧ, ಸ್ವಾಧೀನತೆ, ವಿಸ್ತೀರ್ಣ, ಮೇಲ್ಛಾವಣಿ ವಿವರ, ಬಳಕೆ ಉದ್ದೇಶ, ಚೆಕ್ಕುಬಂದಿ ವಿವರಗಳನ್ನು ದಾಖಲಿಸುವ ಜತೆಗೆ ತೆರಿಗೆ ವಸೂಲಾತಿಗೆ ಮಾತ್ರ ಒಳಪಟ್ಟಿರುತ್ತದೆಂಬ ಸ್ವಯಂ ಘೋಷಣೆ ಜತೆಗೆ ಸಮೀಕ್ಷಾ ತಂಡದ ದೃಢೀಕರಣ, ಬಾಜುದಾರ ಮತ್ತು ಸಾಕ್ಷಿಗಳ ಸಹಿ, ಗ್ರಾಮ ಪಂಚಾಯಿತಿಯ ನೌಕರ/ ಸದಸ್ಯರು/ ಅಧ್ಯಕ್ಷರು/ ಉಪಾಧ್ಯಕ್ಷರ ದೃಢೀಕರಣವನ್ನು ಈ ಸ್ವೊಷಣಾ ಪತ್ರ ಒಳಗೊಂಡಿರುತ್ತದೆ. ಆದರೆ ಗ್ರಾಮ ಪಂಚಾಯಿತಿಯ ಅವಧಿ ಮುಕ್ತಾಯ ಹಂತದಲ್ಲಿರುವ ಸಮಯದಲ್ಲಿ ಆಸ್ತಿ ಅಳತೆ ವೇಳೆ ಗೊಂದಲ ಉಂಟಾದರೆ ಸ್ಥಳೀಯ ಜನಪ್ರತಿನಿಧಿಗಳು ಮಧ್ಯ ಪ್ರವೇಶಿಸುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬ ಭಾವನೆ ಸಾರ್ವಜನಿಕರಲ್ಲಿದೆ.

ಸ್ವ-ಸಹಾಯ ಸದಸ್ಯರು ಸೂಕ್ತವೇ?: ಸಾಮಾನ್ಯ ಜನರಿಗೆ ನ್ಯಾಯ ಸಿಗುವಂತೆ ವಿವಿಧ ರೂಪದ ತೆರಿಗೆ ವಿಧಿಸಲು ಅಳತೆ ಕಾರ್ಯಕ್ಕೆ ಸ್ವಸಹಾಯ ಸಂಘದ ಸದಸ್ಯರ ನಿಯೋಜನೆ ಎಷ್ಟು ಸರಿ ಎಂಬ ಪ್ರಶ್ನೆ ಸಹಜವಾಗಿಯೇ ಸಾರ್ವಜನಿಕರು ಮತ್ತು ಸದಸ್ಯರ ತಲೆ ಕೆಡಿಸಿದೆ.

ಅಳತೆ ಕಾರ್ಯಕ್ಕೆ ನಿಯೋಜನೆ ಆಗುವ ಸಂಘದ ಸದಸ್ಯರಿಗೆ ಕನಿಷ್ಠ ವಿದ್ಯಾರ್ಹತೆ, ತರಬೇತಿ ಇರಬೇಕಾಗುತ್ತದೆ. ಏನೂ ಇಲ್ಲದೆ ಅಳತೆ ನಡೆಸುವುದು ಸಮಂಜಸವಲ್ಲ ಎಂದು ಹೆಸರು ಹೇಳಲು ಇಚ್ಚಿಸದ ಗ್ರಾಪಂ ಅಧ್ಯಕ್ಷರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಕರ ನಿರ್ಧರಣೆಗಾಗಿ ಮಾಡಿರುವ ಸ್ವತ್ತಿನ ಅಳತೆ ಮಾಡುವ ಹೊಸ ಪ್ರಯೋಗ ನಾಲ್ಕು ತಾಲೂಕುಗಳ 127 ಗ್ರಾಮ ಪಂಚಾಯಿತಿಗಳಲ್ಲಿ ಯಾವುದೇ ಗೊಂದಲವಿಲ್ಲದೆ, ಅಳತೆಯ ಪರಿಣತಿ ಇಲ್ಲದ ಸ್ವಸಹಾಯ ಗುಂಪುಗಳ ಸದಸ್ಯರಿಂದ ಸ್ವತ್ತು ಮತ್ತು ನಿವೇಶನಗಳ ಅಳತೆಯ ಕಾರ್ಯ ಪರಿಣಾಮಕಾರಿಯಾಗಿ ನಡೆಯಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ಕಾಯ್ದೆಯಲ್ಲಿ ಹೇಳುವುದಿಷ್ಟು: ಕರ್ನಾಟಕ ಭೂ ಕಂದಾಯ ಕಾಯ್ದೆ, 1964 ಹಾಗೂ ಕರ್ನಾಟಕ ಭೂ ಕಂದಾಯ ನಿಯಮಾವಳಿ 1966ರ ಅಧ್ಯಾಯ 12ರಲ್ಲಿ ತಿಳಿಸಿರುವಂತೆ ಕೃಷಿಯೇತರ ಜಮೀನಿನಲ್ಲಿರುವ ಆಸ್ತಿಗಳಿಗೆ ಸಂಬಂಧಿಸಿದಂತೆ ಸರ್ವೇ ಸೆಟಲ್‌ಮೆಂಟ್ ಆ್ಯಂಡ್ ಲ್ಯಾಂಡ್ ರೆಕಾರ್ಡ್ಸ್ ಇಲಾಖೆಯ ಆಸ್ತಿಗಳ ದಾಖಲೆಯನ್ನು ಕಂದಾಯ ಇಲಾಖೆಯೇ ನಿರ್ವಹಿಸಬೇಕಾಗುತ್ತದೆ. ಗ್ರಾಮ ಪಂಚಾಯಿತಿಗಳು ಗ್ರಾಮಠಾಣ ಜಾಗದಲ್ಲಾಗಲಿ, ಕೃಷಿಯೇತರ ಮತ್ತು ಕೃಷಿ ಜಮೀನಿನಲ್ಲಾಗಲಿ ನಿರ್ಮಿಸಿರುವ ಆಸ್ತಿಗಳಿಗೆ ತೆರಿಗೆ ವಸೂಲಿ ಮತ್ತು ನಿರ್ಧರಣಾ ಪಟ್ಟಿಯನ್ನು ನಿರ್ವಹಿಸಲಷ್ಟೆ ಅವಕಾಶವಿದೆ. ಕೃಷಿ ತೆರಿಗೆ ನಿರ್ಧರಣೆಗೆ ಒಳಪಟ್ಟಿರುವ ಭೂಮಿಗಳ ಮೇಲೆ ನಿರ್ಮಿಸಿರುವ ಕಟ್ಟಡಗಳಿಗೆ ವಿಧಿಸಿರುವ ತೆರಿಗೆ ವಸೂಲಿ ಮಾಡಿದಾಗ ರಶೀದಿಯ ಮೇಲೆ ಕಂದಾಯ ಸ್ವೀಕೃತಿಯು ತೆರಿಗೆದಾರರಿಗೆ ಯಾವುದೇ ಮಾಲೀಕತ್ವದ ಹಕ್ಕನ್ನು ದೃಢೀಕರಿಸುವುದಿಲ್ಲ ಎಂಬುದಿದೆ.

ಪಿಡಿಒಗಳೇ ನೇರ ಹೊಣೆ: ಗ್ರಾಮ ಪಂಚಾಯಿತಿ ಆಸ್ತಿಗೆ ದರ ಪರಿಷ್ಕರಣೆ ಮಾಡುವುದು ಸೂಕ್ತ. ಪಂಚಾಯಿತಿಗಳಲ್ಲಿ ಇ-ಖಾತಾ ನಿರ್ವಹಿಸುವ ಸಮಯದಲ್ಲಿ ಪಿಡಿಒಗಳಿಗೆ ಅಳತೆ ಮಾಡಲು ಅಧಿಕಾರವಿಲ್ಲ. ಸ್ವತ್ತಿನ ಅಳತೆಗಾಗಿ ಮೋಜಿಣಿಗೆ ಹಾಕಿ ಸ್ಕೆಚ್ ಪಡೆಯಲಾಗುತ್ತದೆ. ಅದರೆ ಈಗ ಯಾವುದೇ ತರಬೇತಿ ಇಲ್ಲದ ಸ್ವಸಹಾಯ ಸಂಘದ ಸದಸ್ಯರಿಂದ ಅಳತೆ ಮಾಡಿಸಲು ಮುಂದಾಗಿರುವುದು ಎಷ್ಟು ಸರಿ, ಇದರಿಂದ ಸ್ವತ್ತಿನ ಮಾಲೀಕರ ಆಸ್ತಿಗಳ ಮೂಲಪತ್ರ, ಪಂಚಾಯಿತಿ ಡಿಮ್ಯಾಂಡ್ ಪುಸ್ತಕ ಮತ್ತು ಇ-ಖಾತಾಗಳಲ್ಲಿ ಒಂದೇ ಅಳತೆ ಇರಬೇಕಾಗುತ್ತದೆ. ಬಾಜುದಾರರರು ಇದನ್ನು ಸಮ್ಮತಿಸಿ ಸಹಿ ಮಾಡಬೇಕಾಗಿರುವದರಿಂದ ಅಳತೆಯಲ್ಲಿ ವ್ಯತ್ಯಾಸ ಮತ್ತು ಗ್ರಾಮಗಳಲ್ಲಿನ ಆಸ್ತಿಗಳಲ್ಲಿ ಗೊಂದಲ ಏರ್ಪಟ್ಟರೆೆ ಪಿಡಿಒಗಳೇ ಹೊಣೆಗಾರರಾಗಬೇಕಾಗುತ್ತದೆ ಎಂದು ಕಾರ್ಯಕ್ರಮ ಅನುಷ್ಠಾನಕ್ಕೆ ಚುನಾಯಿತ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ಕೈ ಚೆಲ್ಲುತ್ತಿದ್ದಾರೆ.