ಹುಣಸೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ(ನರೇಗಾ) ಯೋಜನೆಯಡಿ ಪ್ರತಿ ಮನೆಯಲ್ಲೂ ವೈಯಕ್ತಿಕ ಬಚ್ಚಲುಗುಂಡಿ ನಿರ್ಮಾಣ ಮಾಡಿಕೊಳ್ಳುವ ಮೂಲಕ ಬೂದು ನೀರುಮುಕ್ತ ಗ್ರಾಮವನ್ನಾಗಿ ಮಾಡಲು ಗ್ರಾಮ ಪಂಚಾಯಿತಿಯಿಂದ ಯೋಜನೆ ರೂಪಿಸಲಾಗಿದೆ ಎಂದು ಹಳೇಬೀಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಣ್ಣ ಹೇಳಿದರು.
ಔಟ್ ರೀಚ್ ಸಂಸ್ಥೆ ಸಹಯೋಗದಲ್ಲಿ ಗ್ರಾ.ಪಂ.ಕಚೇರಿ ಆವರಣದಲ್ಲಿ ಗುರುವಾರ ಸ್ವಚ್ಛತೆಯೆಡೆಗೆ ದಿಟ್ಟ ಹೆಜ್ಜೆ ಹಾಗೂ ಉದ್ಯೋಗ ಖಾತ್ರಿ ನಡಿಗೆ ಸಬಲತೆಯೆಡೆಗೆ ಅಭಿಯಾನದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿದರು.
ಮಹಾತ್ಮ ಗಾಂಧೀಜಿ ಅವರ ಗ್ರಾಮೀಣಾಭಿವೃದ್ಧಿ ಆಶಯದೊಂದಿಗೆ ಯೋಜನೆ ಜಾರಿಗೊಂಡಿದ್ದು, ಪ್ರತಿಯೊಬ್ಬರೂ ಈ ಯೋಜನೆಯಡಿ ಇರುವಂತಹ ವೈಯಕ್ತಿಕ ಸೌಲಭ್ಯಗಳಾದ ಬಚ್ಚಲುಗುಂಡಿ, ಕೊಟ್ಟಿಗೆ ನಿರ್ಮಾಣ, ಕೋಳಿಶೆಡ್, ಕುರಿಶೆಡ್, ಹಂದಿಶೆಡ್, ಕೊಳವೆ ಬಾವಿ ಮರುಪೂರಣ ಘಟಕ, ತೋಟಗಾರಿಕೆ ಇಲಾಖೆಯಡಿ ರೈತರ ಜಮೀನುಗಳಲ್ಲಿ ತೆಂಗು, ಬಾಳೆ, ಸೀಬೆ, ಗುಲಾಬಿ, ಮಲ್ಲಿಗೆ, ಕೃಷಿ ಇಲಾಖೆಯಡಿ ಜಮೀನುಗಳಲ್ಲಿ ಬದು ನಿರ್ಮಾಣ, ಕೃಷಿ ಹೊಂಡ, ರೇಷ್ಮೆ ಇಲಾಖೆಯಡಿ ಹಿಪ್ಪು ನೇರಳೆ ಬೆಳೆಯಲು ಅವಕಾಶವಿದ್ದು, 2025-26ನೇ ಸಾಲಿನ ಕ್ರಿಯಾ ಯೋಜನೆ ಸಿದ್ಧಪಡಿಸಲು ಐಇಸಿ ಚಟುವಟಿಕೆಯಡಿ ವಾರ್ಡ್‌ಸಭೆ ಮತ್ತು ಗ್ರಾಮಸಭೆ ಮೂಲಕ ಕ್ರಮ ವಹಿಸಲಾಗುವುದು. ಅಂತೆಯೇ ಗ್ರಾಮವನ್ನು ಬೂದು ನೀರು ಮುಕ್ತ ಗ್ರಾಮವನ್ನಾಗಿ ಮಾಡಲು ಪ್ರತಿ ಮನೆಗಳಲ್ಲೂ ಬಚ್ಚಲುಗುಂಡಿ ನಿರ್ಮಾಣ ಮಾಡಲು ಯೋಜನೆಯಡಿ ರೂಪುರೇಷೆ ಸಿದ್ಧಮಾಡಿಕೊಳ್ಳಲಾಗುತ್ತಿದೆ ಎಂದರು.
ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳು ಅರಿವು ಜಾಥಾ ನಡಸಿ ಪ್ಲಾಸ್ಟಿಲ್ ತ್ಯಜಿಸಿ ಬಟ್ಟೆ ಬ್ಯಾಗ್ ಬಳಸಿ, ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಬೇರ್ಪಡಿಸಿ ಎಂಬ ಸಂದೇಶ ಸಾರಿದರು. ಸ್ಥಳೀಯ ಕಲಾತಂಡದ ವತಿಯಿಂದ ಬೀದಿ ನಾಟಕ ಪ್ರದರ್ಶನ ಆಯೋಜಿಸಿ, ಒಣ ಕಸ ಮತ್ತು ಹಸಿ ಕಸವನ್ನು ಮೂಲದಿಂದಲೇ ಬೇರ್ಪಡಿಸುವುದು, ನರೇಗಾ ಯೋಜನೆ ಪ್ರಯೋಜನ ಕುರಿತು ಮಾಹಿತಿ ನೀಡಲಾಯಿತು.
ಸಂಜೀವಿನಿ ಒಕ್ಕೂಟದ ಸದಸ್ಯರು ಅಮೃತ ಸರೋವರ, ಹಸಿ ಕಸ, ಒಣ ಕಸ, ಅಪಾಯಕಾರಿ ಕಸದ ಬೇರ್ಪಡಿಸುವಿಕೆ, ಬೂದು ನೀರು ನಿರ್ವಹಣೆ ಮತ್ತು ಬಚ್ಚಲುಗುಂಡಿ ನಿರ್ಮಾಣದ ಕುರಿತಾಗಿ ಬಣ್ಣಬಣ್ಣದ ರಂಗೋಲಿ, ಚಿತ್ರ ಬಿಡಿಸುವ ಮೂಲಕ ಗ್ರಾಮೀಣರ ಗಮನಸೆಳೆಯುವಲ್ಲಿ ಯಶಸ್ವಿಯಾದರು. ಸ್ವಚ್ಛತಾ ಹೀ ಸೇವಾ ಪ್ರತಿಜ್ಞೆಯನ್ನು ನೆರೆದಿದ್ದ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಸ್ವೀಕರಿಸಲಾಯಿತು.
ಗ್ರಾ.ಪಂ.ಅಧ್ಯಕ್ಷೆ ಶ್ರುತಿ ಮಂಜುನಾಥ, ಸದಸ್ಯರಾದ ಮಹೇಶ್, ಮಹದೇವ, ರವಿಕುಮಾರ್, ಗೌರಮ್ಮ, ಎನ್.ಆರ್.ಎಲ್.ಎಂ ತಾಲೂಕು ವ್ಯವಸ್ಥಾಪಕಿ ಮಂಜುಳಾ ನರಗುಂದ, ಔಟ್ ರೀಚ್ ಸಂಸ್ಥೆ ತರಬೇತಿ ಸಂಯೋಜಕ ಜಿ.ಎಸ್.ಜಗದೀಶ್, ನರೇಗಾ ಐಇಸಿ ಸಂಯೋಜಕಿ ಎಸ್.ಪುಷ್ಪಾವತಿ, ಕ್ಷೇತ್ರ ಸಿಬ್ಬಂದಿ ಮಹದೇವ, ಶಶಿಕುಮಾರ್, ಕಾರ್ತಿಕ್, ಕಾರ್ಯದರ್ಶಿ ಶಿವರಾಜ್, ಹಳೇಬೀಡು ಶಾಲಾ ಮುಖ್ಯ ಶಿಕ್ಷಕ ಗುರುಮೂರ್ತಿ, ದೈಹಿಕ ಶಿಕ್ಷಕ ರಿಯಾಜ್ ಪಾಷ, ಗೌರಮ್ಮ ಇತರರು ಇದ್ದರು.