ಹುಬ್ಬಳ್ಳಿ: ಸಂವಿಧಾನದ ತಿದ್ದುಪಡಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡರ ಜಾಣ್ಮೆಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಾರ್ವಜನಿಕವಾಗಿಯೇ ಓರೆಗಲ್ಲಿಗೆ ಹಚ್ಚಿದ ಘಟನೆ ಹುಬ್ಬಳ್ಳಿಯಲ್ಲಿ ಶುಕ್ರವಾರ ನಡೆಯಿತು.
ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ನಿಂದ ಶುಕ್ರವಾರ ಆಯೋಜಿಸಿದ್ದ ನಮ್ಮ ಗ್ರಾಮ ನಮ್ಮ ಶಕ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ ಇತಿಹಾಸ ಗೊತ್ತಿರಬೇಕು. ಬಹಳಷ್ಟು ಜನ ಮುಖಂಡರಿಗೆ ಪಕ್ಷದ ಇತಿಹಾಸ ಗೊತ್ತಿರುವುದಿಲ್ಲ. ಇನ್ನೂ ಕಾರ್ಯಕರ್ತರನ್ನು ಕೇಳುವುದು ತಪು್ಪ ಎಂದರು.
ಪಂಚಾಯತ್ರಾಜ್ ಮತ್ತು ನಗರಾಡಳಿತ ಸಂಸ್ಥೆಗಳ ರಚನೆಗೆ ಸಂಬಂಧಿಸಿದಂತೆ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಯಾದಾಗ ರಾಜ್ಯದ ಮುಖ್ಯಮಂತ್ರಿ ಯಾರು ಆಗಿದ್ದರು? ಎಂದು ಸಿದ್ದರಾಮಯ್ಯ ವೇದಿಕೆಯಲ್ಲಿದ್ದ ಮುಖಂಡರನ್ನು ಪ್ರಶ್ನಿಸಿದರು. ಬೆರಳೆಣಿಕೆಯಷ್ಟು ಮುಖಂಡರು ಮಾತ್ರ ಈ ಬಗ್ಗೆ ಸರಿಯಾದ ಉತ್ತರ ಹೇಳಿದರು. ಆ ಸಮಯದಲ್ಲಿ ವೀರಪ್ಪ ಮೋಯ್ಲಿ ಮುಖ್ಯಮಂತ್ರಿ ಆಗಿದ್ದರು ಎಂದು ಉತ್ತರಿಸಿದ ಸಿದ್ದರಾಮಯ್ಯ, ಪಕ್ಷ ಹಾಗೂ ರಾಷ್ಟ್ರದ ಇತಿಹಾಸದ ಸಂಪೂರ್ಣ ಅರಿವು ಇರುವವರು ನಿಜವಾದ ಜನಪ್ರತಿನಿಧಿ ಆಗಲು ಸಾಧ್ಯ ಎಂದರು.
ಶಾಸಕರಾದ ಪ್ರಸಾದ ಅಬ್ಬಯ್ಯ, ಕುಸುಮಾವತಿ ಶಿವಳ್ಳಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಾಜಿ ಸಂಸದ ಐ.ಜಿ. ಸನದಿ, ಮಾಜಿ ವಿಧಾನ ಪರಿಷತ್ ಸದಸ್ಯರಾದ ನಾಗರಾಜ ಛಬ್ಬಿ, ವೀರಣ್ಣ ಮತ್ತಿಕಟ್ಟಿ, ಮಾಜಿ ಶಾಸಕ ಎಂ.ಎಸ್. ಅಕ್ಕಿ, ಪ್ರಮುಖರಾದ ಅನಿಲಕುಮಾರ ಪಾಟೀಲ, ಸದಾನಂದ ಡಂಗನವರ, ಅರವಿಂದ ಕಟಗಿ, ಪಾರಸಮಲ್ ಜೈನ್, ಶಿವಾನಂದ ಕರಿಗಾರ ಇತರರಿದ್ದರು.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಗೆಲುವು ಅಸಾಧ್ಯ: ಮೀಸಲಾತಿ, ಅಧಿಕಾರ ವಿಕೇಂದ್ರೀಕರಣದ ವಿರೋಧಿ ಬಿಜೆಪಿಯವರು ಗ್ರಾಪಂ ಚುನಾವಣೆಯಲ್ಲಿ ತಿಪ್ಪರಲಾಗ ಹಾಕಿದರೂ ಗೆಲ್ಲಲು ಸಾಧ್ಯವಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಹುಬ್ಬಳ್ಳಿ ನಗರದಲ್ಲಿ ಶುಕ್ರವಾರ ರಾತ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಸಭೆ ಸದಸ್ಯರಾಗಿದ್ದ ರಾಮಾಜೋಯಿಸ್ ಅವರು ಮೀಸಲಾತಿ ವಿರೋಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದರೂ ಬಿಜೆಪಿಯವರು ಚಕಾರ ಎತ್ತಲಿಲ್ಲ. ಗ್ರಾಮ ಸ್ವರಾಜ್ ಘೋಷಣೆಯೊಂದಿಗೆ ಬಿಜೆಪಿಯವರು ಗ್ರಾಮ ಪಂಚಾಯಿತಿ ಚುನಾವಣೆಗೆ ಇಳಿದಿದ್ದಾರೆ. ಆದರೆ, ಈ ಶಬ್ದ ಹೇಳಿದ್ದು ಮಹಾತ್ಮ ಗಾಂಧೀಜಿ ಎಂಬುದನ್ನು ಅವರು ನೆನಪಿಟ್ಟುಕೊಳ್ಳಲಿ. ಗ್ರಾಮ ಸ್ವರಾಜ್ ಕಾಂಗ್ರೆಸ್ನ ಕೂಸು. ಅದಕ್ಕೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಟೀಕಿಸಿದರು. ರಾಜ್ಯದಲ್ಲಿ ಶೇ. 50ರಷ್ಟು ಮಹಿಳೆಯರಿಗೆ ಹಾಗೂ ಶೇ. 33ರಷ್ಟು ಹಿಂದುಳಿದವರಿಗೆ, ದಲಿತರಿಗೆ ಮೀಸಲಾತಿ ನೀಡಿದ್ದು ಕಾಂಗ್ರೆಸ್. ಬಿಜೆಪಿಯವರು ರಾಜಕೀಯ ಮೀಸಲಾತಿ ಬಗ್ಗೆ ಎಂದಿಗೂ ಮಾತನಾಡಿಲ್ಲ ಎಂದರು. ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಈಗಿನ ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿದೆ. ಇಂದಿರಾ ಕ್ಯಾಂಟೀನ್ಗೆ ಹಣ ಕೊಡುತ್ತಿಲ್ಲ. 4.10 ಕೋಟಿ ಜನರಿಗೆ ತಲಾ 7 ಕೆಜಿಯಂತೆ ಕಾಂಗ್ರೆಸ್ ಸರ್ಕಾರ ಕೊಡುತ್ತಿದ್ದ ಅಕ್ಕಿಯನ್ನು ಬಿಜೆಪಿ ಸರ್ಕಾರ ತಲಾ 5 ಕೆಜಿಗೆ ಇಳಿಸಿದೆ ಎಂದು ದೂರಿದರು.
ನಮ್ಮದು ಗಾಂಧೀಜಿ ಹಿಂದುತ್ವ: ಬಿಜೆಪಿಯವರದ್ದು ಸಾವರಕರ ಹಿಂದುತ್ವವಾದರೆ ಕಾಂಗ್ರೆಸ್ನವರದ್ದು ಮಹಾತ್ಮ ಗಾಂಧೀಜಿ ಹಿಂದುತ್ವ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಪಾದಿಸಿದರು. ಬಿಜೆಪಿಯವರು ಸ್ವಾತಂತ್ರ್ಯ್ಕಾಗಿ ಹೋರಾಡಿಲ್ಲ, ಬಲಿದಾನವನ್ನೂ ಮಾಡಿಲ್ಲ. ಅಂಥವರು ಕಾಂಗ್ರೆಸ್ನವರಿಗೆ ದೇಶಭಕ್ತಿಯ ಪಾಠ ಮಾಡುತ್ತಾರೆ ಎಂದರು.
ಮಾತು ಕೇಳುವುದಿಲ್ಲ: ಅಧಿವೇಶನದಲ್ಲಿಯೇ ಬಿಜೆಪಿಯವರು ನಮ್ಮ ಮಾತು ಕೇಳುವುದಿಲ್ಲ. ಇನ್ನು, ಸಾರಿಗೆ ಸಿಬ್ಬಂದಿ ನಡೆಸುತ್ತಿರುವ ಮುಷ್ಕರಕ್ಕೆ ಸಂಬಂಧಿಸಿದಂತೆ ಸಲಹೆ ಕೇಳುತ್ತಾರೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಸಾರಿಗೆ ಸಿಬ್ಬಂದಿಯ ಹೋರಾಟ ನ್ಯಾಯಯುತವಾಗಿದ್ದರೆ ಸರ್ಕಾರ ತಕ್ಷಣ ಸ್ಪಂದಿಸಲಿ. ಇದರಿಂದ ಜನಸಾಮಾನ್ಯರಿಗೆ ತೊಂದರೆ ಆಗುವುದು ಬೇಡ ಎಂದರು.