ಮಾಯಕೊಂಡ: ಕುಡಿತಕ್ಕೆ ಬಲಿಯಾದವರನ್ನು ಸನ್ಮಾರ್ಗದತ್ತ ತರುವ ಸದುದ್ದೇಶದಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಶಿಬಿರ ಯಶಸ್ಸು ಕಾಣುತ್ತಿದೆ. ಚಟಕ್ಕೆ ಬಿದ್ದ ಯುವಕರು ಈ ಶಿಬಿರಗಳಿಂದ ಹೊಸ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದು ಗ್ರಾಪಂ ಅಧ್ಯಕ್ಷ ಕೆ.ಎಂ. ರೇವಣಸಿದ್ದಪ್ಪ ತಿಳಿಸಿದರು.
ದಾವಣಗೆರೆ ತಾಲೂಕಿನ ಎಲೆಬೇತೂರು ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಶುಕ್ರವಾರ ಎಲೆ ಬೇತೂರು ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಆಯೋಜಿಸಿದ್ದ 1927ನೇ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಶ್ರೀ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಮದ್ಯವರ್ಜನ ಶಿಬಿರ ಅವಿಸ್ಮರಣೀಯ ಕಾರ್ಯಕ್ರಮವಾಗಿದೆ. ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಯುವಜನರು ಕುಡಿತದ ದಾಸ್ಯಕ್ಕೆ ಬಲಿಯಾಗಿ ಜೀವನವನ್ನು ಹಾಳು ಮಾಡಿಕೊಳ್ಳುವ ಜತೆಗೆ ಸ್ವಸ್ಥ ಸಮಾಜ ಹಾಳಾಗುತ್ತಿದೆ ಎಂದರು.
ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಷಡಕ್ಷರಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳ ಜನರು ಮದ್ಯದ ದಾಸರಾಗಿ ನೆಮ್ಮದಿ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಇದನ್ನು ಮನಗಂಡ ಹೆಗ್ಗಡೆ ದಂಪತಿಗಳು ಶಿಬಿರದ ಮೂಲಕ ಚಟದಿಂದ ಮುಕ್ತಿ ಪಡೆದು ಉತ್ತಮ ಜೀವನ ಕಟ್ಟಿಕೊಳ್ಳಲು ದಾರಿ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.
ಜನಜಾಗೃತಿ ವೇದಿಕೆ ಪ್ರಾದೇಶಿಕ ಯೋಜನಾಧಿಕಾರಿ ನಾಗರಾಜ್ ಕುಲಾಲ್ ಮಾತನಾಡಿ, 7 ದಿನಗಳ ಕಾಲ ಈ ಶಿಬಿರ ನಡೆಯಲಿದ್ದು ಮೇ 31ಕ್ಕೆ ಅಂತ್ಯವಾಗಲಿದೆ. ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಕುಡಿತದ ವಿಮುಕ್ತಿಗೆ ವಿಶೇಷ ಬೋಧನೆ ಮಾಡಿಸಲಾಗುವುದು ಎಂದು ತಿಳಿಸಿದರು.
ಧಗ್ರಾಯೋ ದಾವಣಗೆರೆ ಜಿಲ್ಲಾ ನಿರ್ದೇಶಕ ಲಕ್ಷ್ಮಣ್ ಮಾತನಾಡಿ, ಮದ್ಯವರ್ಜನ ಶಿಬಿರ ಇಡಿ ಸಮುದಾಯ ಮತ್ತು ಸಮಾಜದ ಶ್ರೇಯೋಭಿವೃದ್ಧಿಗೆ ಅನುಕೂಲಕರ ಕಾರ್ಯಕ್ರಮ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಲವಾರು ಕಾರ್ಯಕ್ರಮಗಳಲ್ಲಿ ಇದು ಅತ್ಯಂತ ಮಹತ್ವದಾಗಿದೆ ಎಂದರು.
ಯುವಜನಾಧಿಕಾರಿ ಯಶೋದಾ ಸ್ವಾಗತಿಸಿದರು. ಮೇಲ್ವಿಚಾರಕ ಕೊಟ್ರೇಶ್ ನಿರೂಪಿಸಿ, ವಂದಿಸಿದರು.
ಶಿಬಿರ ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ಬಸವರಾಜಪ್ಪ, ಮುಖಂಡರಾದ ಮಳೆಗೇರ ಬಸವರಾಜಪ್ಪ, ಸಂಗನಗೌಡ್ರು, ಸಿದ್ದಯ್ಯ ಎಂ. ನಾಗರಾಜ್, ಕೃಷಿಕ ವಿಶ್ವನಾಥ್, ಎನ್.ಎಂ. ಬಸಪ್ಪ, ಬಿ. ಶಿವಕುಮಾರ್, ಯೋಜನೆಯ ಹಲವು ಅಧಿಕಾರಿಗಳು, ಮೇಲ್ವಿಚಾರಕರು, ಕಾರ್ಯಕರ್ತರು, ಗ್ರಾಮಸ್ಥರು ಇದ್ದರು.