ಪುರುಷೋತ್ತಮ ಪೆರ್ಲ ಕಾಸರಗೋಡು
ಪಿಲಿಕೋಡ್ ಗ್ರಾಮ ಪಂಚಾಯಿತಿಯಲ್ಲಿರುವ ಗ್ರಾಮ ಕಿರಣ ಬೀದೀಪ ನಿರ್ಮಾಣ ಮತ್ತು ನಿರ್ವಹಣಾ ಘಟಕ ಇಂದು ಮಹಿಳೆಯರ ಗುಂಪಿಗೆ ಜೀವನದ ಬೆಳಕನ್ನು ತೋರಿಸುತ್ತಿದೆ.
ಕುಟುಂಬಶ್ರೀಯ ಜಾಬ್ ಕೆಫೆ ನೇತೃತ್ವದಲ್ಲಿ ಚೆರುವತ್ತೂರು ಸಿಡಿಎಸ್ ಹಾಲ್‌ನಲ್ಲಿ ತರಬೇತಿ ನೀಡುವ ಮೂಲಕ ಆರಂಭಗೊಂಡ ಈ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಆರಂಭದಲ್ಲಿ ಎಲ್‌ಇಡಿ ಬಲ್ಬ್ ತಯಾರಿಕೆಯಲ್ಲಿ ತರಬೇತಿ ನೀಡಲಾಗಿದ್ದು, ನಂತರ ಇದನ್ನು ಬೀದಿ ದೀಪ ತಯಾರಿಕೆಗೆ ವಿಸ್ತರಿಸಲಾಯಿತು. ಮಾರ್ಚ್ 2018ರಲ್ಲಿ ಜಿಲ್ಲಾ ಕುಟುಂಬಶ್ರೀ ಮಿಷನ್ ನೇತೃತ್ವದಲ್ಲಿ ವಲಿಯಪರಂಬ, ತ್ರಿಕರಿಪುರ, ಪಡನ್ನ, ಚೆರ್ವತ್ತೂರು ಗ್ರಾಮ ಪಂಚಾಯಿತಿ ಮತ್ತು ನೀಲೇಶ್ವರ ನಗರಸಭೆಯ ಇಪ್ಪತ್ತ ಮೂರು ಮಂದಿ ಮಹಿಳೆಯರಿಗೆ ಬೀದಿದೀಪ ತಯಾರಿಕೆಯಲ್ಲಿ ತರಬೇತಿ ನೀಡಲಾಯಿತು.
ಹೆಚ್ಚಿದ ಆತ್ಮವಿಶ್ವಾಸ: ಮಹಿಳೆಯರು ಸಾಮಾನ್ಯವಾಗಿ ತೊಡಗಿಸಿಕೊಳ್ಳಲು ಹಿಂದೇಟು ಹಾಕುತ್ತಿರುವ ಇಂತಹ ಕ್ಷೇತ್ರಕ್ಕೆ ಕಾಲಿಡುವಾಗ ಕಾಡುತ್ತಿದ್ದ ಆತಂಕ ಇಂದು ದೂರಾಗಿದೆ. ಕಳೆದ ಆರು ವರ್ಷಗಳಲ್ಲಿ ನಾಡಿಗೆ ಬೆಳಕು ನೀಡುತ್ತಿರುವ ಗ್ರಾಮ ಕಿರಣ ಇಂದು ಹದಿನಾಲ್ಕು ಸದಸ್ಯರನ್ನು ಹೊಂದಿದೆ. ಪ್ರಸಕ್ತ ಪಿಲಿಕೋಡ್‌ನ ಎಡಚ್ಚೇರಿಯಲ್ಲಿ ಘಟಕದ ಕಚೇರಿ ಕಾರ್ಯಾಚರಿಸುತ್ತಿದೆ. ಎಲ್‌ಇಡಿ ಬಲ್ಬ್‌ಗಳು ಮತ್ತು ಬೀದಿದೀಪಗಳನ್ನು ತಯಾರಿಸಿ ಜಿಲ್ಲೆಯ ಇಪ್ಪತ್ತು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಪೂರೈಸಲಾಗುತ್ತಿದೆ. ದೋಷಪೂರಿತ ಬೀದಿದೀಪಗಳನ್ನು ದುರಸ್ತಿ ಮಾಡುವುದರಿಂದ ಹಿಡಿದು ಹೊಸ ಬಲ್ಬ್‌ಗಳನ್ನು ಅಳವಡಿಸುವವರೆಗೆ ಬೆಳಗ್ಗಿಂದ ಸಂಜೆವರೆಗೆ ಇವರ ಈ ಕಾಯಕ ಮುಂದುವರಿಯುತ್ತಿದೆ. ಇತರ ರಾಜ್ಯಗಳಿಂದ ತರುವ ಕಚ್ಚಾ ವಸ್ತುಗಳನ್ನು ಬಳಸಿ ಬಲ್ಬುಗಳನ್ನು ತಯಾರಿಸಲಾಗುತ್ತದೆ.
ಸರ್ಕಾರಿ ಸಂಸ್ಥೆಗಳಲ್ಲದೆ ಸಾರ್ವಜನಿಕರೂ ಗ್ರಾಮ ಕಿರಣ ಬಲ್ಬ್‌ಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಆರಂಭಿಕ ದಿನಗಳಲ್ಲಿ ಬಲ್ಬ್‌ಗಳನ್ನು ನೇರವಾಗಿ ಮನೆಗಳಿಗೆ ಮಾರಾಟ ಮಾಡಲಾಗುತ್ತಿದ್ದರೆ, ಇಂದು ಗ್ರಾಮ ಕಿರಣ ಮೂಲಕ ತಯಾರಿಸಿದ ಬಲ್ಬ್‌ಗಳು ವಿವಿಧೆಡೆ ನಡೆಯುವ ಪ್ರದರ್ಶನ ಮತ್ತು ಮಾರುಕಟ್ಟೆ ವೇದಿಕೆಗಳಲ್ಲಿ ಲಭ್ಯವಿವೆ.
ಭವಿಷ್ಯದಲ್ಲಿ ಸೌರ ದೀಪಗಳ ತಯಾರಿಕೆಯಲ್ಲಿ ತರಬೇತಿ ನೀಡುವ ಮೂಲಕ ಸೌರ ಯೋಜನೆಗೆ ಬೆಂಬಲ ನೀಡುವ ಯೋಜನೆಯನ್ನೂ ಸಂಸ್ಥೆ ಹೊಂದಿದೆ. ಅಧಿಕಾರಿಗಳು ಇದನ್ನು ಹೆಚ್ಚಿನ ಹಂತಗಳಿಗೆ ವಿಸ್ತರಿಸಲು ಪ್ರಯತ್ನಿಸುತ್ತಿದ್ದಾರೆ. ಇದು ನಮ್ಮಲ್ಲಿ ಹೆಚ್ಚಿನ ವಿಶ್ವಾಸ ಮೂಡಿಸಿದೆ. ಕೆ.ವಿ.ಕೃಷ್ಣ ವಿಜಿ ಗ್ರಾಮ ಕಿರಣ ಘಟಕ ಕಾರ್ಯದರ್ಶಿ ಈಗ ನನಗೆ ಬದುಕಲು ನನ್ನದೇ ಆದ ಆದಾಯವಿದೆ. ಇದು ನನಗೆ ಹೆಚ್ಚಿನ ಆತ್ಮವಿಶ್ವಾಸ ತಂದುಕೊಟ್ಟಿದೆ. ಇದು ಮಹಿಳೆಯರಿಗೆ ಹೇಳಿದ ಕೆಲಸವಲ್ಲ ಎಂದು ಸಮಾಜ ಪದೇ ಪದೆ ಹೇಳಿದಾಗಲೂ ನಾವು ಹಿಂಜರಿಯಲಿಲ್ಲ ಮತ್ತು ಅದರ ಮೇಲೆಯೇ ನಮ್ಮ ಜೀವನವನ್ನು ಕಟ್ಟಿಕೊಂಡಿದ್ದೇವೆ. ಮಿನಿ ಎಂ., ಗ್ರಾಮ ಕಿರಣ ಕಾರ್ಮಿಕರು 1 ಕೋಟಿ ರೂ. ಅಧಿಕ ಆದಾಯ 2018ರಲ್ಲಿ ಈ ಉಪಜೀವನ ಕ್ರಮ ಪ್ರಾರಂಭಿಸುವಾಗ ಆದಾಯ ತುಂಬಾ ಕಡಿಮೆಯಾಗಿತ್ತು. ನಂತರ ಬೀದಿದೀಪಗಳ ನಿರ್ಮಾಣ ಪ್ರಾರಂಭವಾದಾಗ ಆದಾಯದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಇಂದು ಈ ಯೋಜನೆ ವರ್ಷಕ್ಕೆ 1 ಕೋಟಿ ರೂ.ಗಿಂತ ಹೆಚ್ಚು ಆದಾಯ ಗಳಿಸುತ್ತದೆ. ಈ ಯೋಜನೆ ಹೊರಗಿನಿಂದ ಬಂದ ಆರು ಜನರಿಗೆ ಉದ್ಯೋಗ ಒದಗಿಸಿದೆ. ಮನೆಗಳಿಗೆ ಅಲಂಕಾರಿಕ ಬಲ್ಬ್‌ಗಳು ಮತ್ತು ಸೌರಶಕ್ತಿ ಬಲ್ಬ್‌ಗಳನ್ನು ತಯಾರಿಸುವ ಗುರಿಯನ್ನು ಯೋಜನೆ ಹೊಂದಿದೆ. ಈ ಮೂಲಕ ಆದಾಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಪಿ.ಪಿ.ಅಶೋಕನ್, ಗ್ರಾಮ ಕಿರಣ ಸಂಯೋಜಕ