ಜಿಲ್ಲೆ

ಗ್ರಾಮ ಠಾಣಾ ವಿಸ್ತರಣೆಗೆ ಹೋರಾಟ

ಹರ್ಷ ನ.ಪುರೋಹಿತ

ಬಸವಾಪಟ್ಟಣ: ಬ್ರಿಟಿಷರ ಕಾಲದಿಂದ ಈಗಿನವರೆಗೆ ಗ್ರಾಮ ಠಾಣಾ ವ್ಯಾಪ್ತಿ ವಿಸ್ತರಣೆ ಆಗಿಲ್ಲ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಗ್ರಾಮ ಠಾಣಾ ವಿಸ್ತರಣೆಗಾಗಿ ಹೋರಾಟ ಮಾಡುವುದು ಅನಿವಾರ್ಯ ಎಂದು ಜಿಪಂ ಮಾಜಿ ಸದಸ್ಯ ತೇಜಸ್ವಿ ಪಟೇಲ್ ಹೇಳಿದರು.

ಸಮೀಪದ ಕಾರಿಗನೂರು ಶ್ರೀ ಉಡಸಲಾಂಬಿಕ ದೇವಸ್ಥಾನದ ಆವರಣದಲ್ಲಿ ಈಚೆಗೆ ಆಯೋಜಿಸಿದ್ದ ಗ್ರಾಮ ಠಾಣಾ ವಿಸ್ತರಣೆ ಕುರಿತ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಇ-ಸ್ವತ್ತು ಪದ್ಧತಿ ಬರುವವರೆಗೂ ತೊಂದರೆ ಇರಲಿಲ್ಲ. ಗ್ರಾಮ ಪಂಚಾಯಿತಿಯಲ್ಲಿ ಈಗ ಇ-ಸ್ವತ್ತು ಅಗತ್ಯ ದಾಖಲೆ ಆಗುತ್ತಿದೆ. ಮನವಿ ನೀಡಿದರೆ ಗ್ರಾಮ ಠಾಣಾ ವ್ಯಾಪ್ತಿ ವಿಸ್ತರಿಸುವುದಾಗಿ ಹೇಳುತ್ತಾರೆ. ಆದರೆ, ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದರು.

ಆಡಳಿತ ಯಂತ್ರಕ್ಕೆ ಹೋರಾಟದ ಮೂಲಕ ಬಿಸಿ ಮುಟ್ಟಿಸಬೇಕು. ಜಡ ವ್ಯವಸ್ಥೆಯಲ್ಲಿ ಸೌಲಭ್ಯ ಪಡೆಯುವುದು ಕಷ್ಟದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಪಿಡಿಒ ಗೋಪಾಲಕೃಷ್ಣ ಮಾತನಾಡಿ, 2016ರಲ್ಲಿ ರಾಜ್ಯ ಸರ್ಕಾರ ಗ್ರಾಮ ಠಾಣಾ ವಿಸ್ತರಣೆಗೆ ಸುತ್ತೋಲೆ ಹೊರಡಿಸಿದೆ ಎಂದು ಹೇಳಿದರು.

ಗ್ರಾಮೀಣ ಜನರು ಮನೆ ಕಟ್ಟಿಕೊಳ್ಳಲು ಇ-ಸ್ವತ್ತು ಸಹಕಾರಿ. ಆದ್ದರಿಂದ ಗ್ರಾಮ ಠಾಣಾ ವಿಸ್ತರಣೆ ಸೂಕ್ತ ಎಂದು ಗ್ರಾಪಂ ಸದಸ್ಯ ಬಸವರಾಜ್ ಪಟೇಲ್ ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಪ್ರಿಯಾಂಕಾ, ಉಪಾಧ್ಯಕ್ಷೆ ಹೇಮಾವತಿ, ಸದಸ್ಯರಾದ ಚೇತನ್‌ಕುಮಾರ್, ಶರತ್, ಸಂದೀಪ್, ಪ್ರವೀಣ್, ಕಿರಣ್, ಮಾಜಿ ಸದಸ್ಯರಾದ ಮುರುಗೇಶ್, ಜಯಪ್ಪ ಗೌಡ್ರು, ಕಂದಾಯ ನಿರೀಕ್ಷಕ ಬಸಣ್ಣ, ಗ್ರಾಮ ಲೆಕ್ಕಾಧಿಕಾರಿ ಬಸವರಾಜ್ ಉಪಸ್ಥಿತರಿದ್ದರು.