ಅಧಿಕಾರಿಗಳು ಗೈರಾದ ಹಿನ್ನೆಲೆಯಲ್ಲಿ ನಂಜನಗೂಡು ತಾಲೂಕಿನ ದೇವರಸನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮ ಸಭೆ ರದ್ದುಗೊಳಿಸಲಾಯಿತು. 
ಜಿಲ್ಲೆ

ಅಧಿಕಾರಿಗಳು ಬಾರದ್ದಕ್ಕೆ ಗ್ರಾಮ ಸಭೆ ರದ್ದು

ನಂಜನಗೂಡು: ತಾಲೂಕಿನ ದೇವರಸನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಾಮ ಸಭೆಗೆ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಗ್ರಾಮ ಸಭೆಯನ್ನು ರದ್ದು ಮಾಡಲಾಯಿತು.

ಗ್ರಾಪಂ ಅಧ್ಯಕ್ಷೆ ಸೌಭಾಗ್ಯಾ ನೇತೃತ್ವದಲ್ಲಿ ಸಭೆ ಪ್ರಾರಂಭಗೊಂಡಿತು. ಪ್ರಾರಂಭದಲ್ಲಿ 2023-24ನೇ ಸಾಲಿನ ಸಾಮಾಜಿಕ ಲೆಕ್ಕಪರಿಶೋಧನೆಯನ್ನು ಮಂಡಿಸುತ್ತಿದ್ದ ಸಂದರ್ಭದಲ್ಲಿ 21 ಇಲಾಖೆ ಅಧಿಕಾರಿಗಳು ಹಾಜರಾಗಬೇಕಾಗಿತ್ತು. ಆದರೆ ಎರಡು ಇಲಾಖೆ ಅಧಿಕಾರಿಗಳು ಮಾತ್ರ ಸಭೆಗೆ ಹಾಜರಿರುವುದನ್ನು ಕಂಡು ಗ್ರಾಮಸ್ಥರು ಕೆಂಡಾಮಂಡಲವಾದರು.

ಈಗಾಗಲೇ ಗ್ರಾಮ ಸಭೆಯನ್ನು ಕರೆದು ನಾಲ್ಕು ವರ್ಷಗಳೇ ಕಳೆದಿದೆ. ಗ್ರಾಮ ಸಭೆಗೆ ಮುಖ್ಯವಾಗಿ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ನೋಡಲ್ ಅಧಿಕಾರಿ ಹಾಜರಾಗಬೇಕು. ಆದರೆ ಮುಖ್ಯವಾದ ಅಧಿಕಾರಿಗಳೇ ಗೈರಾಗಿರುವುದು ಎಷ್ಟು ಸರಿ. ಗ್ರಾಮದಲ್ಲಿರುವ ಸಮಸ್ಯೆಗಳನ್ನು ನಾವು ಯಾರ ಬಳಿ ಹೇಳಿಕೊಳ್ಳುವುದು. ಗ್ರಾಮದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಸ್ವಚ್ಛತೆ ಇಲ್ಲ. ಫಲಾನುಭವಿಗಳಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ.ಆದ್ದರಿಂದ ಸಭೆಗೆ ಎಲ್ಲ ಇಲಾಖೆ ಅಧಿಕಾರಿಗಳು ಹಾಜರಾಗುವವರೆಗೂ ಸಭೆಯನ್ನು ಮುಂದೂಡುವಂತೆ ಪಿಡಿಒ ಚೈತ್ರಾ ಅವರ ವಿರುದ್ಧ ಕಿಡಿಕಾರಿದರು.

ಎಲ್ಲ ಅಧಿಕಾರಿಗಳಿಗೆ ನೋಟಿಸ್ ಕೊಡಲಾಗಿದೆ. ಆದರೂ ಕೂಡ ಸಭೆಗೆ ಹಾಜರಾಗಿಲ್ಲ. ಈ ವಿಷಯದ ಬಗ್ಗೆ ಮತ್ತೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗುವುದು. ಅಧ್ಯಕ್ಷರ ಸಮ್ಮತಿಯಂತೆ ಗ್ರಾಮ ಸಭೆಯನ್ನು ಮುಂದೂಡಿ ಮತ್ತೊಂದು ದಿನಾಂಕವನ್ನು ನಿಗದಿಪಡಿಸಲಾಗುವುದೆಂದು ಪಿಡಿಒ ಗ್ರಾಮಸ್ಥರಿಗೆ ತಿಳಿಸಿದರು.