ಗ್ರಾಮಸಭೆ 
ಜಿಲ್ಲೆ

ಗ್ರಾಮಸಭೆಗೆ ಅಧಿಕಾರಿ ಗೈರು ಸಮಸ್ಯೆ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಗ್ರಾಮ ಪಂಚಾಯಿತಿಯಿಂದ ನಡೆಯುವ ಗ್ರಾಮಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸದೆ, ಜನಸಾಮಾನ್ಯರ ಸಾಕಷ್ಟು ಸಮಸ್ಯೆಗಳು ಬಗೆ ಹರಿಯದೇ ಇರುವುದು ಬೇಸರದ ಸಂಗತಿ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಯಲಚಗೆರೆ ಹನುಮಂತರಾಜು ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಶ್ರೀನಿವಾಸಪುರ ಗ್ರಾ.ಪಂ. ಆವರಣದಲ್ಲಿ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಮಾತನಾಡಿದರು.
ಪತ್ರಿವರ್ಷವೂ ಗ್ರಾಪಂನಲ್ಲಿ ಗ್ರಾಮಸಭೆಯನ್ನು ನಡೆಸುತ್ತಿದ್ದು, ತಾಲೂಕುಮಟ್ಟದ ಬಹುತೇಕ ಅಧಿಕಾರಿಗಳು ಭಾಗವಹಿಸುತ್ತಿಲ್ಲ. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಿಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಪ್ರಮುಖವಾಗಿ ಬೆಸ್ಕಾಂ, ಕೃಷಿ ಇಲಾಖೆ, ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ ಸೇರಿ ವಿವಿಧ ಇಲಾಖೆಗೆ ಸಂಬಂಧಿದಂತೆ ಹಲವು ಸಮಸ್ಯೆಗಳನ್ನು ರೈತರು ಗ್ರಾಮಸಭೆಯಲ್ಲಿ ತಿಳಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇಲ್ಲದೇ ಇರುವುದು ಬೇಸರದ ಸಂಗತಿ. ಅಧಿಕಾರಿಗಳು ಸರ್ಕಾರದಿಂದ ತಗೆದುಕೊಳ್ಳುವ ಸಂಬಳಕ್ಕೆ ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕಿದೆ. ಕೇವಲ ಶ್ರೀನಿವಾಸಪುರ ಗ್ರಾ.ಪಂ. ಸಮಸ್ಯೆಯಲ್ಲಿ ಇದು ಬಹುತೇಕ ಗ್ರಾಮಸಭೆಗೆ ಅಧಿಕಾರಿಗಳು ಭಾಗವಹಿಸುತ್ತಿಲ್ಲ. ಕೂಡಲೇ ಸಂಬಂಧಪಟ್ಟ ಮೇಲಾಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕಿದೆ. ಗ್ರಾ.ಪಂ. ಪಿಡಿಒ ಮೂಲಕ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದರು.

ಕುಡಿಯುವ ನೀರಿಗೆ ಆದ್ಯತೆ ಬೇಸಿಗೆಗಾಲದ ಜತೆಗೆ ಬರಗಾಲ ಸಂಭವಿಸಿದ್ದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ನೀರನ್ನು ಮಿತವಾಗಿ ಬಳಕೆ ಮಾಡಬೇಕಿದೆ. ಕುಡಿಯುವ ನೀರಿನ ಸಮಸ್ಯೆಗಳನ್ನು ಕಂಡುಬಂದಲ್ಲಿ ಪಂಚಾಯಿತಿ ಹಾಗೂ ಸದಸ್ಯರ ಗಮನಕ್ಕೆ ತಂದಲ್ಲಿ ಕುಡಿಯುವ ನೀರಿನ ಪೂರೈಕೆ ಮಾಡುವ ಕಾರ್ಯ ಮಾಡಲಾಗುವುದು. ಜತೆಗೆ ಪಶು, ಪಕ್ಷಿಗಳಿಗೆ ನೀರಿಲ್ಲದೆ ಬೇಸಿಗೆಗಾಲದಲ್ಲಿ ಮೃತಪಡುತ್ತಿರುವುದರಿಂದ ಪ್ರತಿಯೊಬ್ಬರು ಮನೆಯ ಸಮೀಪ ಪ್ರಾಣಿ, ಪಕ್ಷಿಗಳಿಗೆ ನೀರನ್ನು ಇಡಬೇಕು. ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಿ, ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ ಎಂದು ಗ್ರಾ.ಪಂ. ಅಧ್ಯಕ್ಷ ಯಲಚಗೆರೆ ಹನುಮಂತರಾಜು ತಿಳಿಸಿದರು.