ಜಿಲ್ಲೆ

4 ತಿಂಗಳಿಗೊಮ್ಮೆ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷೆ ಸಭೆ

ವಿಜಯವಾಣಿ ಸುದ್ದಿಜಾಲ ಧಾರವಾಡ
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆ ಮಾಡದ ಕಾರಣ ತಳಮಟ್ಟದ ಸಮಸ್ಯೆಗಳು ಸಭೆಯಲ್ಲಿ ಕೇಳಿ ಬರುತ್ತಿವೆ. ಜಿಪಂ ಸಿಇಒ ಸೇರಿ ಜಿಲ್ಲಾ ಮಟ್ಟ, ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿದ್ದರೆ ಸಭೆಯಲ್ಲಿ ದೂರುಗಳು ಬರುತ್ತಿರಲಿಲ್ಲ. ಹಿರಿಯ ಅಧಿಕಾರಿಗಳ ಜವಾಬ್ದಾರಿ ಇಲ್ಲವಾಗಿದೆ. ಮುಂದಿನ ದಿನಗಳಲ್ಲಿ 4 ತಿಂಗಳಿಗೊಮ್ಮೆ ಗ್ರಾಪಂ ಅಧ್ಯಕ್ಷರ, ಉಪಾಧ್ಯಕ್ಷ ಸಭೆ ನಡೆಸುವುದು ಕಡ್ಡಾಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೂಚಿಸಿದರು.
ನಗರದ ಕೃಷಿ ವಿಶ್ವ ವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬರಗಾಲ ಸಮರ್ಪಕ ನಿರ್ವಹಣೆ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ನರೇಗಾ ಯೋಜನೆ ಜಾರಿ ಬಳಿಕವೇ ಕೂಲಿ ಹೆಚ್ಚಿದೆ. ಜಿಲ್ಲೆಯಲ್ಲಿ 1.68 ಲಕ್ಷ ಜನರು ಜಾಬ್ ಕಾರ್ಡ್ ಹೊಂದಿದ್ದು, ಶೇ. 50ರಷ್ಟು ಕಾರ್ಡ್ ಮಾತ್ರ ಚಾಲ್ತಿಯಲ್ಲಿವೆ. ಇದೇ ಕಾರಣಕ್ಕೆ ನರೇಗಾ ಯೋಜನೆಯಲ್ಲಿ ಸೂಕ್ತ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಸಂಪೂರ್ಣ ಗುರಿ ತಲುಪಿದರೆ ಜಿಲ್ಲೆಯಲ್ಲಿ ಬಡ ಜನರಿಗೆ ಸುಮಾರು 540 ಕೋಟಿ ರೂ. ನೀಡಬಹುದು. ಆದರೆ ನಮ್ಮಲ್ಲಿ ಅರ್ಧದಷ್ಟೂ ತಲುಪಿಲ್ಲ. ಇದಕ್ಕೆ ಅಧಿಕಾರಿಗಳ ಸಮನಯ್ವತೆ ಕೊರತೆ, ಸೂಕ್ತ ಸಮಯಕ್ಕೆ ಹಣ ಪಾವತಿ ಮಾಡದಿರುವುದೇ ಕಾರಣ ಎಂದರು.
ಹೆಚ್ಚಿನ ಮಾನ ದಿನಗಳ ಸೃಜನೆಗಾಗಿ ಪ್ರತಿ ಗ್ರಾಮಗಳಲ್ಲಿ ಜನರಿಗೆ ಅರಿವು ಮೂಡಿಸಬೇಕು. ಈ ಕಾರ್ಯಕ್ಕೆ ಜಿಪಂ ಕ್ಷೇತ್ರವಾರು ಅಧಿಕಾರಿಗಳು ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಇನ್ನು ಅಭಿವೃದ್ಧಿ ಕಾರ್ಯಗಳ ಹಿನ್ನಡೆಗೆ ಅಧಿಕಾರಿಗಳೇ ಕಾರಣ ಎನ್ನುವ ಗ್ರಾಪಂ ಅಧ್ಯಕ್ಷರು-ಉಪಾಧ್ಯಕ್ಷರು, ಪಿಡಿಒಗಳು ತಮ್ಮ ಜವಾಬ್ದಾರಿಯನ್ನೂ ಅರಿಯಬೇಕು. ಎಚ್ಚರಿಕೆ, ಜವಾಬ್ದಾರಿಯಿಂದ ತಮ್ಮ ಗ್ರಾಮದ ಸುಧಾರಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಮುಂದಿನ ಒಂದು ವಾರದಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ಪಂಚಾಯಿತಿ ವ್ಯಾಪ್ತಿಯ ಬೋರ್‌ವೆಲ್, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಇತರೆ ಆಸ್ತಿಗಳ ಸುಸ್ಥಿತಿ ಕುರಿತು ವರದಿ ಸಲ್ಲಿಸಬೇಕು ಎಂದು ಸಚಿವರು ಸೂಚಿಸಿದರು.
ನವಲಗುಂದ ಶಾಸಕ ಎನ್.ಎಚ್. ಕೋನರೆಡ್ಡಿ ಮಾತನಾಡಿದರು. ಸಭೆಗೆ ಆಗಮಿಸಿದ್ದ ಜಿಲ್ಲೆಯ ಗ್ರಾಪಂ ಅಧ್ಯಕ್ಷರು-ಉಪಾಧ್ಯಕ್ಷರು, ನೇರೇಗಾ ಯೋಜನೆಯಲ್ಲಿನ ತಾಂತ್ರಿಕ, ಆಡಳಿತಾತ್ಮಕ ಸಮಸ್ಯೆಗಳ ಬಗ್ಗೆ ಹೇಳಿಕೊಂಡರು. ಕೂಲಿ ಕಾರ್ಮಿಕರಿಗೆ ಬೇಗ ಕೆಲಸಗಳಿಗೆ ಅನುಮತಿ ಕೊಡುತ್ತಿಲ್ಲ. ಕಾಮಗಾರಿಗೆ 60:40 ಅನುಪಾತ ಇರುವ ಹಿನ್ನೆಲೆಯಲ್ಲಿ ರಸ್ತೆ, ಗಟಾರು ಕಾಮಗಾರಿಗಳಿಗೆ ಒಪ್ಪಿಗೆ ಸಿಗುತ್ತಿಲ್ಲ. ಕಾಮಗಾರಿ ಅಂದಾಜು ಪತ್ರಿಕೆಗೆ ಜಿಪಂನಿಂದ ಅನುಮತಿ ವಿಳಂಬವಾಗುತ್ತಿದೆ. ಕಾಮಗಾರಿಗೆ ಬಳಕೆಯಾದ ಕಚ್ಚಾ ವಸ್ತುಗಳ ಬಿಲ್ ಬಾಕಿ ಸೇರಿ ಹಲವು ಕಾರಣಗಳಿಂದ ಸಮಸ್ಯೆ ಉಂಟಾಗಿದೆ ಎಂದು ಅಳಲು ತೋಡಿಕೊಂಡರು.
ಜಲಜೀವನ ಮಿಶನ್ ಯೋಜನೆ ಅಡಿ ಎಲ್ಲೆಡೆ ನಳ ಜೋಡಣೆ ಮಾಡಲಾಗಿದೆ. ಪೈಪಲೈನ್ ಸರಿಯಾಗದ ಕಾರಣ ಪದೇ ಪದೇ ಹಾಳಾಗುತ್ತಿವೆ. ಕೊಳವೆ ಬಾವಿ ಕೊರೆಯಿಸಿ 4-6 ತಿಂಗಳಾದರೂ ವಿದ್ಯುತ್ ಸಂಪರ್ಕ ಇಲ್ಲ. ತಡಕೋಡ, ನವಲಗುಂದ ಸೇರಿ ಹಲವು ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಯಲ್ಲಿವೆ ಎಂದು ಸಮಸ್ಯೆ ಹೇಳಿಕೊಂಡರು.
ಸಮಸ್ಯೆಗಳಿಗೆ ಪ್ರತಿಕ್ರಿಯಿಸಿದ ಸಚಿವ ಲಾಡ್, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಳಾಂತರಕ್ಕೆ ಸೂಕ್ತ ಕಾರಣ ಇದ್ದರೆ ಮಾತ್ರ ಮಾಡಿ. ಸ್ಥಳ ಸ್ವಚ್ಛವಾಗಿಲ್ಲ ಎಂಬ ಸಣ್ಣ ಪುಟ್ಟ ಕಾರಣಕ್ಕೆ ಸ್ಥಳಾಂತರ ಬೇಡ. ಜನರು ಸಮಸ್ಯೆ ಹೇಳಿದಾಗ ಪರಿಹಾರ ನೀಡುವ ಬದಲು ಸಮಸ್ಯೆ ಬರದಂತೆ ಕಾರ್ಯ ನಿರ್ವಹಿಸುವುದು ಮುಖ್ಯವಾಗಿದೆ. ಇಂತಹ ಕಾರ್ಯವನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಮಾಡಬೇಕಿದೆ ಎಂದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಉಪವಿಭಾಗಾಧಿಕಾರಿ ಶಾಲಂ ಹುಸೇನ, ಜಿಪಂ ಉಪಕಾರ್ಯದರ್ಶಿ ಬಸಲಿಂಗಯ್ಯ ಮುಗನೂಮಠ, ಡಿಡಿಪಿಐ ಎಸ್.ಎಸ್. ಕೆಳದಿಮಠ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕಾಶಿನಾಥ ಭದ್ರಣ್ಣವರ, ಕೃಷಿ ಇಲಾಖೆ ಜಂಟಿನಿರ್ದೇಶಕ ಡಾ. ಕಿರಣಕುಮಾರ, ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಇತರರು ಇದ್ದರು.
ಜಿಪಂ ಸಿಇಒ ಸ್ವರೂಪ ಟಿ.ಕೆ. ಅವರು ಜಿಲ್ಲೆಯ ಬರಗಾಲ ಪರಿಸ್ಥಿತಿ ಮತ್ತು ಬರಗಾಲ ಪೀಡಿತ ಪ್ರದೇಶಗಳ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ಸಿಟ್ಟಾದ ಸಂತೋಷಬರಗಾಲ ನಿರ್ವಹಣಾ ಪ್ರಗತಿ ಪರಿಶೀಲನಾ ಸಭೆ ಆರಂಭವಾದ ಕೆಲ ಹೊತ್ತಿನಲ್ಲಿ ವಿಷಾಯಂತರ ಆಗುತ್ತಿರುವುದನ್ನು ಕಂಡ ಗ್ರಾಪಂ ಅಧ್ಯಕ್ಷರೊಬ್ಬರು, ಸಚಿವರು ಬರಗಾಲ ಕ್ರಮಗಳ ಬಗ್ಗೆ ಪರಿಶೀಲನೆ ಮಾಡುವುದನ್ನು ಬಿಟ್ಟು ಬೇರೆನೋ ಮಾಡುತ್ತಿದ್ದೀರಿ. ನಿಮ್ಮ ಮುಖ ತೋರಿಸಲು ಇಲ್ಲಿಗೆ ಬಂದಿದ್ದೀರಾ? ಎಂದು ಪ್ರಶ್ನಿಸಿದರು. ಈ ಮಾತಿಗೆ ಕೆಂಡಾಮಂಡಲವಾದ ಸಚಿವ ಲಾಡ್, ನಿಮ್ಮೂರು ಅಭಿವೃದ್ಧಿಗಾಗಿ ನಾನು ಬಂದಿದ್ದೇನೆ. ನಿನಗಿಂತ ಹೆಚ್ಚು ಕೆಲಸ ಮಾಡುತ್ತಿರುವ ನನಗೆ ಜಿಲ್ಲೆ ಜವಾಬ್ದಾರಿ ಇದೆ. ನಾನೇಕೆ ಮುಖ ತೋರಿಸಲು ಬರಲಿ ಎಂದು ತರಾಟೆಗೆ ತೆಗೆದುಕೊಂಡರು. ಕೂಡಲೇ ಸಚಿವರಲ್ಲಿ ಗ್ರಾಪಂ ಅಧ್ಯಕ್ಷ ಕ್ಷಮೆಯಾಚಿಸಿದ ಪ್ರಸಂಗ ನಡೆಯಿತು.