ಬೇಲೂರು: ಕುಡಿಯುವ ನೀರಿಗಾಗಿ ತಾಲೂಕಿನ ನೆಟ್ಟೇಕೆರೆ ಗ್ರಾಮದಲ್ಲಿ ಮೂರು ದಿನಗಳ ಹಿಂದೆ ಕೆಲವರು ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಇಬ್ಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಮಂಜುನಾಥ್ ನೇತೃತ್ವದಲ್ಲಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್ ಗ್ರಾಮಸ್ಥರ ಕುಡಿಯುವ ನೀರಿಗಾಗಿ ಶುಕ್ರವಾರ ಪೈಪ್‌ಲೈನ್ ಅಳವಡಿಸಿ ಸಮಸ್ಯೆ ಬಗೆಹರಿಸಿದರು.
ಇಬ್ಬೀಡು ಗ್ರಾಪಂ ಅಧ್ಯಕ್ಷೆ ಮಂಜುಳಾ ಮಂಜುನಾಥ್ ಮಾತನಾಡಿ, ಇಬ್ಬೀಡು ಗ್ರಾಪಂ ವ್ಯಾಪ್ತಿಗೆ 16 ಗ್ರಾಮಗಳು ಬರುವುದರಿಂದ ಕುಡಿಯುವ ನೀರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ. ಎರಡು ದಿನಗಳ ಹಿಂದೆ ನಮ್ಮ ನೆಟ್ಟೇಕೆರೆ ಗ್ರಾಮದಲ್ಲಿ ಯಾವುದೇ ರೀತಿಯ ನೀರಿನ ಸಮಸ್ಯೆ ಇರಲಿಲ್ಲ. ಕೆಲವರಿಗೆ ನೀರು ಸಿಕ್ಕಿಲ್ಲ ಎಂಬ ವೈಯಕ್ತಿಕ ಉದ್ದೇಶದಿಂದ ಪ್ರತಿಭಟನೆ ಮಾಡಿದ್ದರು. ಆದರೆ ಅವರಂತೆ ನಾವು ಸಮಸ್ಯೆಯನ್ನು ವೈಯಕ್ತಿಕವಾಗಿ ತೆಗೆದುಕೊಳ್ಳದೆ ಜವಾಬ್ದಾರಿ ವಹಿಸಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಪರಿಶೀಲಿಸಿ ನೀರು ಕೊಡುವುದಕ್ಕೆ ಪೈಪ್‌ಲೈನ್ ಅಳವಡಿಸಿ ಶಾಶ್ವತ ಪರಿಹಾರ ಕ್ರಮ ಕೈಗೊಂಡಿದ್ದೇವೆ. ಜತೆಗೆ ಇಬ್ಬೀಡು ಗ್ರಾಪಂ ವ್ಯಾಪ್ತಿಯಲ್ಲಿ ಉತ್ತಮ ಕೆಲಸ ಮಾಡಿದ್ದಕ್ಕಾಗಿ ನಮ್ಮ ಗ್ರಾಪಂಗೆ ಎರಡು ಬಾರಿ ಮಹತ್ಮಾಗಾಂಧಿ ಪ್ರಶಸ್ತಿ ಪುರಸ್ಕಾರ ದೊರತಿದ್ದು, ಯಾವುದೇ ಗ್ರಾಮವನ್ನು ನಿರ್ಲಕ್ಷ್ಯ ಮಾಡದೆ ಕೆಲಸ ಮಾಡಿಸುತಿದ್ದೇವೆ ಎಂದರು.
ಇಬ್ಬೀಡು ಗ್ರಾಪಂ ಅಭಿವೃದ್ಧಿ ಅಧಿಕಾರಿ ರವಿಕುಮಾರ್ ಮಾತನಾಡಿ, ಮೂರು ದಿನಗಳ ಹಿಂದೆ ಎರಡು ಕುಟುಂಬಗಳಿಗೆ ನೀರು ಸಿಕ್ಕಿಲ್ಲ ಎಂದು ಪ್ರತಿಭಟಿಸಿದ್ದರು. 30 ವರ್ಷದಿಂದ ನೀರು ಗಂಟಿಯಾಗಿ ಕೆಲಸ ನಿರ್ವಹಿಸುತ್ತಿರುವವರು ಈ ಗ್ರಾಮಕ್ಕೆ ಮಾತ್ರವಲ್ಲದೆ ಪಕ್ಕದ ಸೂರಪುರ ಗ್ರಾಮಕ್ಕೂ ನೀರನ್ನು ಕೊಡುವ ಮೂಲಕ ಕೆಲಸ ಮಾಡುತಿದ್ದಾರೆ. ಆದರೆ ಎರಡು ದಿನಗಳ ಹಿಂದೆ ಬಂದ ಮಳೆಯಿಂದ ಗೇಟ್ ವಾಲ್ ಸಂಪೂರ್ಣ ಮುಚ್ಚಿಹೋದ ಕಾರಣ ನೀರು ಬಿಡಲು ಸಾಧ್ಯವಾಗಿರಲಿಲ್ಲ. ಪ್ರತಿ ಮನೆಗೆ ನೀರು ಕೊಡುವ ಜೆಜೆಎಂ ಯೋಜನೆ ಕೆಲಸ ಮಾಡುವಾಗ ಕೆಲ ಪೈಪ್‌ಗಳು ತುಂಡಾಗಿದ್ದು ಅದನ್ನು ಸರಿಪಡಿಸದ ಕಾರಣ ನೀರು ಬಂದಿರಲಿಲ್ಲ. ಅದಕ್ಕೆ ಬದಲಿ ವ್ಯವಸ್ಥೆ ಮೂಲಕ ಸಮಸ್ಯೆ ಬಗೆಹರಿಸಿದ್ದೇವೆ. ಆದರೆ ಕೆಲವರು ವೈಯಕ್ತಿಕ ದ್ವೇಷದಿಂದ ಪ್ರತಿಭಟಿಸುವುದು ಸರಿಯಲ್ಲ. ಏನೇ ಸಮಸ್ಯೆ ಇದ್ದರೂ ನನ್ನ ಬಳಿ ಹೇಳಿದರೆ ಪರಿಹರಿಸುವುದಾಗಿ ಭರವಸೆ ನೀಡಿದರು.
ಗ್ರಾಮಸ್ಥರಾದ ಅಮ್ಮಯಮ್ಮ, ಮಂಜುನಾಥ್, ಕೃಷ್ಣಮೂರ್ತಿ, ವಿಜಯ್, ನಿತಿನ್, ಅರುಣ್, ದೇವರಾಜ್, ಪರಮೇಶ್, ಪುಟ್ಟಸ್ವಾಮಿ, ಯಶೋದಾ, ಕೃತಿ, ಭಾನು ಇತರರಿದ್ದರು.