ಜಿಲ್ಲೆ

ಸದಸ್ಯರಾದ ಮರು ದಿನವೇ ಅಧ್ಯಕ್ಷ ಪಟ್ಟ

ಬಸವಕಲ್ಯಾಣ: ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮತದಾನ ನಡೆದ ದಿನವೇ ಮತ ಎಣಿಕೆ ಮಾಡುವ ಮೂಲಕ ಫಲಿತಾಂಶ ಹೊರಹಾಕಿದ್ದು, ನ್ಯಾಯಾಲಯಕ್ಕೆ ಹೋಗಿದ್ದ ಮಹಿಳೆಗೆ ಜಯ ಸಿಕ್ಕಿರುವುದು ಒಂದೆಡೆಯಾದರೆ ಆಯ್ಕೆಯಾದ ಮರುದಿನವೇ ಅಧ್ಯಕ್ಷ ಪಟ್ಟವೂ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ಹಾರಕೂಡ ಗ್ರಾಪಂ ವ್ಯಾಪ್ತಿಯ ಖೇರ್ಡಾ (ಕೆ) ಗ್ರಾಮದಲ್ಲಿ ಖಾಲಿ ಇದ್ದ ಒಂದು ಗ್ರಾಪಂ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ ನಡೆದಿದೆ. ಗ್ರಾಪಂ ಮಹಿಳಾ ಸದಸ್ಯೆ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಮತದಾನ ಭಾನುವಾರ ನಡೆದಿದ್ದು, ಇದೇ ದಿನ ಮತ ಎಣಿಕೆ ನಡೆದು, ಶೋಭಾವತಿ ವೈಜನಾಥ ಗೆಲುವು ಸಾಧಿಸಿದ್ದರು. ಸೋಮವಾರ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಹಾರಕೂಡ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆದಿದ್ದು, ಅಧ್ಯಕ್ಷ ಸ್ಥಾನ ಎಸ್ಟಿ ಮೀಸಲು, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲಿದೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶೋಭಾವತಿ ೧೪ ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಮೀನಾಕ್ಷಿ ಕಲ್ಯಾಣಿ ೧೧ ಮತ ಪಡೆದು ಸೋತರು.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಾವಿತ್ರಾ ರಾಜಕುಮಾರ ೧೫ ಮತ ಪಡೆದು ಆಯ್ಕೆಯಾದರೆ, ಪ್ರತಿಸ್ಪರ್ಧಿ ರವೀಂದ್ರ ಭೀಮಶಾ ೧೦ ಮತ ಪಡೆದಿದ್ದಾರೆ.
ಆಯ್ಕೆ ಪ್ರಕ್ರಿಯೆ ನಂತರ ಚುನಾವಣಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಮುಂಗ್ಲೆ ಫಲಿತಾಂಶ ಪ್ರಕಟಿಸಿದರು. ಪಿಡಿಒ ವಿಷ್ಣುಕಾಂತ ಉಪಸ್ಥಿತರಿದ್ದರು. ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.