ಜಿಲ್ಲೆ

ಆಸ್ತಿ ಸಮೀಕ್ಷೆ ಮತ್ತು ಕರ ಪರಿಷ್ಕರಣೆಗೆ ಹಿನ್ನಡೆ/ಆರ್ಥಿಕ ವರ್ಷ ಮುಗಿಯುತ್ತ ಬಂದರೂ ಶೇ. 44 ಪ್ರಗತಿ -ತೆರಿಗೆ ವಸೂಲಿಯಲ್ಲಿ ಹಿಂದೆ ಬಿದ್ದ ಗ್ರಾಪಂಗಳು

ಸುಭಾಸ ಹೆಗಡೆ ಧೂಪದಹೊಂಡ

ವಿಜಯವಾಣಿ ಸುದ್ದಿಜಾಲ ಕಾರವಾರ
ಕಳೆದ ವರ್ಷ ನವೆಂಬರ್ ತಿಂಗಳಲ್ಲೇ ಮುಗಿಯಬೇಕಿದ್ದ ಗ್ರಾಪಂ ವ್ಯಾಪ್ತಿಯ ಆಸ್ತಿ ಸಮೀಕ್ಷೆ ಇದುವರೆಗೂ ಪೂರ್ಣವಾಗಿಲ್ಲ. ಇದರಿಂದ ಕರದಾತರು ಕೊಂಚ ನಿರಾಳರಾಗಿದ್ದಾರೆ. ಆದರೆ, ಗ್ರಾಪಂಗಳಿಗೆ ಆದಾಯದ ಖೋತಾ ಆಗಿದೆ.
ಆಸ್ತಿಗಳ ಸಮೀಕ್ಷೆ ನಡೆಸಿ, ಅವುಗಳ ವಿವರಗಳನ್ನು ಪಂಚತಂತ್ರ ತಂತ್ರಾಂಶದಲ್ಲಿ ಅಳವಡಿಸಬೇಕು ಎಂದು 2022 ರ ಆಗಸ್ಟ್ನಲ್ಲಿ ಸರ್ಕಾರ ಆದೇಶ ಹೊರಡಿಸಿತ್ತು. ಆಸ್ತಿ ಸಮೀಕ್ಷೆಯ ಆಧಾರದ ಮೇಲೆ ತೆರಿಗೆಯನ್ನು ಪರಿಷ್ಕರಿಸಬೇಕು. ಅಕ್ರಮ ಆಸ್ತಿಗಳಿದ್ದರೆ ಅದಕ್ಕೆ ದುಪ್ಪಟ್ಟು ತೆರಿಗೆ ವಿಧಿಸಬೇಕು ಎಂದು ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಸುತ್ತೋಲೆಯಲ್ಲಿ ಸೂಚಿಸಲಾಗಿತ್ತು. ಆದರೆ, ಆಸ್ತಿ ತೆರಿಗೆ ಹೆಚ್ಚಿಸುವ ಹಾಗೂ ಅಕ್ರಮ ಆಸ್ತಿಗಳ ಮೇಲೆ ದುಪ್ಪಟ್ಟು ತೆರಿಗೆ ವಿಧಿಸುವ ಸರ್ಕಾರದ ಕ್ರಮಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.
ಈ ನಡುವೆ ಅಕ್ಟೋಬರ್‌ನಲ್ಲಿ ಆಸ್ತಿಗಳ ಸಮೀಕ್ಷೆ ಪ್ರಾರಂಭವಾಗಿದ್ದವು. ನವೆಂಬರ್ ವೇಳೆಗೆ ಅವುಗಳನ್ನು ಮುಗಿಸಬೇಕು. ಪರಿಷ್ಕೃತ ತೆರಿಗೆ ಬದ್ಧತಿಯನ್ನು ಗ್ರಾಮ ಸಭೆ, ಸಾಮಾನ್ಯ ಸಭೆಗಳಲ್ಲಿ ಅನುಮೋದಿಸಿ ಜಾರಿಗೆ ತರಬೇಕು ಎಂಬ ಯೋಜನೆ ರೂಪಿಸಲಾಗಿತ್ತು. ಆದರೆ, ಅದಾಗಿಲ್ಲ. ಬದಲಿಗೆ ಹೊಸ ಪರಿಷ್ಕರಣೆ ಯೋಜನೆಯಿಂದ ಗೊಂದಲ ಉಂಟಾಗಿದೆ. ಸ್ಪಷ್ಟ ಆದೇಶವೂ ಇಲ್ಲದ ಕಾರಣ ಇದುವರೆಗೆ ಆಗುತ್ತಿದ್ದ ತೆರಿಗೆ ವಸೂಲಿಗೂ ಹಿನ್ನಡೆಯಾಗಿರುವ ಆರೋಪವಿದೆ.
6.61 ಕೋಟಿ ಬಾಕಿ
ಜಿಲ್ಲೆಯ 12 ತಾಲೂಕುಗಳ 229 ಗ್ರಾಪಂಗಳಲ್ಲಿ ಈ ವರ್ಷ (2022-23) ಹಳೆಯ ಬಾಕಿಯೂ ಸೇರಿ ಒಟ್ಟು 11.89 ಕೋಟಿ ರೂ. ತೆರಿಗೆ ವಸೂಲಿ ಮಾಡುವ ಗುರಿ ಹೊಂದಲಾಗಿತ್ತು. ಈ ಆರ್ಥಿಕ ವರ್ಷ ಕೊನೆಗೊಳ್ಳಲು ಇನ್ನು 15 ದಿನ ಮಾತ್ರ ಬಾಕಿ ಇದ್ದು, ಇದುವರೆಗೆ ಶೇ. 44.40 ರಷ್ಟು ಮಾತ್ರ ತೆರಿಗೆ ವಸೂಲಿ ಮಾಡಲಾಗಿದೆ. ಇನ್ನೂ 6.61 ಕೋಟಿ ರೂ. ಆಸ್ತಿ ತೆರಿಗೆ ವಸೂಲಿ ಬಾಕಿ ಉಳಿದಿದೆ. ಈ ಹಿಂದಿನ ವರ್ಷದಲ್ಲಿ ಉತ್ತರ ಕನ್ನಡ ಜಿಲ್ಲೆ ಶೇ. 100 ರಷ್ಟು ಗುರಿ ತಲುಪಿದ ಉದಾಹರಣೆಗಳಿವೆ. ಕನಿಷ್ಠ ಶೇ. 80 ರಷ್ಟು ತೆರಿಗೆ ವಸೂಲಿಯಾಗುತ್ತಿತ್ತು. ಇದೇ ಮೊದಲ ಬಾರಿಗೆ ತೆರಿಗೆ ವಸೂಲಿಯಲ್ಲಿ ಜಿಲ್ಲೆ ಹಿಂದೆ ಬಿದ್ದಿದೆ.
ಕಾರ್ಯಚಟುವಟಿಕೆಗೆ ಹಿನ್ನಡೆ..?
ಸಂಗ್ರಹವಾದ ತೆರಿಗೆಯಲ್ಲಿ ಶೇ.24 ರಷ್ಟು ಸರ್ಕಾರಕ್ಕೆ ಭರಣ ಮಾಡಬೇಕು. ಉಳಿದ ಹಣವನ್ನು ಗ್ರಾಪಂ ಸ್ವಚ್ಛತೆ, ಗ್ರಾಮ ಸಭೆಗಳ ಖರ್ಚು, ಹೊರಗುತ್ತಿಗೆ ಸಿಬ್ಬಂದಿ ವೇತನ ಮುಂತಾದ ಇತರ ಖರ್ಚುಗಳಿಗೆ ಬಳಸಲಾಗುತ್ತದೆ. ಆದರೆ, ತೆರಿಗೆ ವಸೂಲಿಯಲ್ಲೇ ಹಿನ್ನಡೆಯಾಗಿರುವುದರಿಂದ ಗ್ರಾಪಂ ಖರ್ಚುಗಳಿಗೂ ತೊಂದರೆಯಾಗುವ ಆತಂಕ ಕಾಡಿದೆ.
..............
ಆಸ್ತಿ ಸಮೀಕ್ಷೆ ಪೂರ್ಣಗೊಳಿಸಿ ಕರ ಸಂಗ್ರಹಣೆ ಚುರುಕು ಮಾಡಲು ಗ್ರಾಪಂ ಪಿಡಿಒಗಳಿಗೆ ಸೂಚಿಸಲಾಗಿದೆ. ಗ್ರಾಪಂಗಳ ಭೇಟಿ ಸಂದರ್ಭದಲ್ಲಿ ಇದನ್ನೂ ಪರಿಗಣಿಸುತ್ತೇನೆ.
ಈಶ್ವರ ಕಾಂದೂ
ಜಿಪಂ ಸಿಇಒ