ಮಂಡ್ಯ: ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಣೆ ಮಾಡಲು ಬೇಕಾಗುವ ಜವಾಬ್ದಾರಿ ನಕ್ಷೆ ರಚನೆ ಮಾಡುವುದು ಸೇರಿದಂತೆ ಸ್ಥಳೀಯ ಸಂಸ್ಥೆಗಳ ವ್ಯವಸ್ಥೆಯ ಉಳಿವಿಗಾಗಿ ಒತ್ತಾಯಿಸಿ ಫೆ.8ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ರಾಜ್ಯ ಸಂಚಾಲಕ ನಾಗೇಶ್ ಉಪ್ಪರಕನಹಳ್ಳಿ ಹೇಳಿದರು.
ಮೇಲಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗ್ರಾಪಂ ಆಡಳಿತದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಈ ಮೂಲಕ ಗ್ರಾಪಂಗಳನ್ನು ಶಾಖಾ ಕಚೇರಿಯನ್ನಾಗಿ ಮಾಡಿಕೊಂಡಿದ್ದಾರೆ. ಪರಿಣಾಮ ಸಂವಿಧಾನ ಬದ್ಧ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಮೂಕ ಪ್ರೇಕ್ಷಕರಾಗಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ಭಾರತದ ಕಟ್ಟಕಡೆಯ ವ್ಯಕ್ತಿಯನ್ನು ಪ್ರಭುವನ್ನಾಗಿಸಬೇಕೆಂಬ ಮಹಾತ್ಮ ಗಾಂಧೀಜಿ ಅವರ ಆಶಯ ಮಣ್ಣು ಪಾಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಗ್ರಾಪಂ ಆಡಳಿತ ವ್ಯವಸ್ಥೆಯನ್ನು ಉಳಿಸಲು ಹೋರಾಟ ಅನಿವಾರ್ಯವಾಗಿದೆ. ಆದ್ದರಿಂದ ಫೆ.8ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬಾಪೂಜಿ ಸೇವಾ ಕೇಂದ್ರದ ಬಲವರ್ಧನೆ, ಮುಂಚೂಣಿ ಕಾರ್ಯಾಲಯಗಳ ಸ್ಥಾಪನೆ, 29 ವಿಷಯಗಳಿಗೆ ಸಂಬಂಧಿಸಿದ ಎಲ್ಲ ಇಲಾಖೆಗಳು ಪಂಚಾಯತ್ ರಾಜ್ ಸಂಸ್ಥೆಯಡಿ ಕಾರ್ಯನಿರ್ವಹಿಸುವಂತಾಗಲು ಅಧಿಕಾರ ವಿಕೇಂದ್ರೀಕರಣ ಕಾಯ್ದೆ ರಚನೆ, ಸದಸ್ಯರನ್ನು ರಾಜ್ಯ ಶಿಷ್ಟಾಚಾರಕ್ಕೆ ಒಳಪಡಿಸುವುದರ ಜತೆಗೆ ಕೇರಳ ಮಾದರಿಯ ಗೌರವಧನ ಹೆಚ್ಚಳ ಹಾಗೂ ಉಚಿತ ಸಂಚಾರಕ್ಕೆ ಬಸ್‌ಪಾಸ್ ವಿತರಣೆ ಸೇರಿದಂತೆ 28 ಬೇಡಿಕೆ ಈಡೇರಿಕೆಗೆ ಒತ್ತಾಯಿಸಲಾಗುವುದು ಎಂದು ವಿವರಿಸಿದರು.
ಒಕ್ಕೂಟದ ತಾಲೂಕು ಅಧ್ಯಕ್ಷ ಪ್ರದೀಪ್ ಸಿದ್ದೇಗೌಡ, ಪದಾಧಿಕಾರಿಗಳಾದ ಬಸವರಾಜು, ಕೆಂಪೇಗೌಡ, ಸುವರ್ಣವತಿ, ಅರ್ಪಿತಾ, ಹನುಮಂತು ಇದ್ದರು.