ಜಿಲ್ಲೆ

ಪಿಡಿಒ ರುದ್ರಯ್ಯ ವಿರುದ್ಧ ಆರೋಪ ಸುಳ್ಳು: ಹಲಗೂರು ಗ್ರಾಪಂ ಸದಸ್ಯ ನಾರಾಯಣಗೌಡ ಸ್ಪಷ್ಟನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಮಳವಳ್ಳಿ ತಾಲೂಕು ಹಲಗೂರು ಗ್ರಾಮ ಪಂಚಾಯಿತಿ ಪಿಡಿಒ ರುದ್ರಯ್ಯ ವಿರುದ್ಧ ಗ್ರಾ.ಪಂ ಸದಸ್ಯ ಸುರೇಂದ್ರ ಮಾಡಿರುವ ಆರೋಪ ಸುಳ್ಳು. ವೈಯಕ್ತಿಕ ಕಾರಣದಿಂದಾಗಿ ಆರೋಪ ಮಾಡಿದ್ದಾರೆ ಎಂದು ಗ್ರಾ.ಪಂ ಸದಸ್ಯ ಕೆ.ಎಂ.ನಾರಾಯಣಗೌಡ ಹೇಳಿದರು.

ಸುರೇಂದ್ರ ಸದಸ್ಯರಾಗಿ ಆಯ್ಕೆಯಾದಾಗಿನಿಂದಲೂ ಗ್ರಾಪಂ ಆಡಳಿತ ಪ್ರಜಾಸತ್ತಾತ್ಮಕವಾಗಿ ನಡೆಯಲು ಬಿಡದೇ, ತನಗೇ ಬೇಕಾದಂತೆ ವ್ಯವಸ್ಥೆ ನಡೆಸುವಂತೆ ಪಿಡಿಒಗಳ ಮೇಲೆ ಒತ್ತಡ ಹೇರುತ್ತಾರೆ. ಈತನ ಒತ್ತಡ ಹಾಗೂ ಕಿರುಕುಳದಿಂದ 2 ವರ್ಷದಲ್ಲಿ 4 ಪಿಡಿಒ ಬದಲಾಗಲು ಕಾರಣರಾಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಸುರೇಂದ್ರ ಹೇಳಿದಂತೆ ಗ್ರಾ.ಪಂನಲ್ಲಿ 11 ಲಕ್ಷ ರೂ ದುರುಪಯೋಗ ಆಗಿರುವುದು ಸತ್ಯ. ಆದರೆ ಅದು ಬಿಲ್ ಕಲೆಕ್ಟರ್ ಆನಂದ್ ಎಂಬುವರಿಂದ ಆಗಿದ್ದು, ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಶೇ.15ರಷ್ಟು ಬಡ್ಡಿಯೊಂದಿಗೆ ಹಣ ಪಾವತಿ ಮಾಡಿಸಿಕೊಳ್ಳಲಾಗಿದೆ. ಈ ಪ್ರಕರಣಕ್ಕೂ ರುದ್ರಯ್ಯ ಅವರಿಗೂ ಯಾವುದೇ ಸಂಬಂಧ ಇರುವುದಿಲ್ಲ. ಜಿಲ್ಲೆಯ ಹೋಬಳಿ ಮಟ್ಟದ ಗ್ರಾಪಂನಲ್ಲಿ ಹಲಗೂರು ಹೆಚ್ಚು ಕಂದಾಯ ಸಂಗ್ರಹವಾಗುವ ಹೆಗ್ಗಳಿಕೆ ಹೊಂದಿದೆ. ಇದೇ ನಿಟ್ಟಿನಲ್ಲಿ ರುದ್ರಯ್ಯ ಕೆಲಸ ಮಾಡುತ್ತಿದ್ದು, ಪಂಚಾಯಿತಿಗೆ ಸಂಬಂಧಿಸಿದಂತೆ ಸುಮಾರು 1.20 ಕೋಟಿ ರೂ ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಿಸುಲು ಕ್ರಮ ವಹಿಸಿದ್ದಾರೆ. 26 ಸದಸ್ಯರಿರುವ ನಮ್ಮ ಗ್ರಾಪಂನಲ್ಲಿ ಸುರೇಂದ್ರ ಅವರಿಗೆ ಯಾವ ಸದಸ್ಯರು ಬೆಂಬಲ ನೀಡಿಲ್ಲ. ಇದರಿಂದಲೇ ಆತ ಸುಳ್ಳು ಆರೋಪ ಮಾಡುತ್ತಿದ್ದಾರೆನ್ನುವುದಕ್ಕೆ ಸಾಕ್ಷಿ. ಇದಲ್ಲದೆ ಈತನ ವಿರುದ್ಧ ಹಣಕಾಸಿನ ದುರ್ಬಳಕೆಗೆ ಒತ್ತಡ ಸಂಬಂಧ ಸದಸ್ಯತ್ವ ರದ್ದು ಮಾಡುವಂತೆ ದೂರು ನೀಡಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಗ್ರಾ.ಪಂ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷೆ ರಕ್ಷಿತಾ, ಸದಸ್ಯರಾದ ಜಮೀಲ್, ಗುಲಾಜ್‌ಬಾನು, ಮುಖಂಡ ಲೋಕೇಶ್ ಇದ್ದರು.