ಕೊಳ್ಳೇಗಾಲ: ತಾಲೂಕಿನ ಸತ್ತೇಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾಗೇರಿ ಡಿ.ಜಿ.ದೊಡ್ಡಿ (12 ನೇ ವಾರ್ಡ್) ಗ್ರಾಪಂ ಸದಸ್ಯನ ಖಾತೆಗೆ ಶನಿವಾರ ಸೈಬರ್ ಕಳ್ಳರು ಕನ್ನ ಹಾಕಿ 1.52 ಲಕ್ಷ ರೂ.ಎಗರಿಸಿದ್ದಾರೆ.
ಗ್ರಾಪಂ ಸದಸ್ಯರೂ ಆದ ರೈತ ಮುಖಂಡ ಮುರುಗನ್ ವಂಚನೆಗೊಳಗಾದವರು. ಕೆನರಾ ಬ್ಯಾಂಕ್‌ನಲ್ಲಿ ಮುರುಗನ್ ಉಳಿತಾಯ ಖಾತೆ ಹೊಂದಿದ್ದು, ಜ.17 ರಂದು ಸಂಜೆ 4.31 ರಲ್ಲಿ ಮಹಿಳೆಯೊಬ್ಬಳು ಕರೆ ಮಾಡಿ ಬ್ಯಾಂಕ್ ಸಿಬ್ಬಂದಿ ಎಂದು ಹಿಂದಿ ಭಾಷೆಯಲ್ಲಿ ಮಾತನಾಡಿ ಪರಿಚಯಿಸಿಕೊಂಡಿದ್ದಾಳೆ. ನಿಮ್ಮ ಖಾತೆ ಲಾಕ್ ಆಗುತ್ತಿದೆ. ಇನ್ಮುಂದೆ ನಿಮ್ಮ ಖಾತೆಗೆ ಹಣ ಜಮೆ ಹಾಗೂ ಪಾವತಿ ಮಾಡಲು ಸಾಧ್ಯವಿರುವುದಿಲ್ಲ ಎಂದು ಹೆದರಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮುರುಗನ್, ಖಾತೆ ಲಾಕ್ ಆಗುವುದರಿಂದ ವ್ಯವಹಾರಕ್ಕೆ ಸಮಸ್ಯೆಯಾಗಲಿದೆ ಎಂದಿದ್ದಾರೆ. ತಕ್ಷಣ ಎಚ್ಚೆತ್ತ ಮಹಿಳೆ, ನಿಮ್ಮ ಕೆಲವು ಮಾಹಿತಿಯನ್ನು ಕಳುಹಿಸಿಕೊಟ್ಟರೆ ಖಾತೆ ಲಾಕ್ ಆಗುವುದನ್ನು ತಪ್ಪಿಸಬಹುದು ಎಂದು ಹೇಳಿ ಪುಸಲಾಯಿಸಿ ದ್ದಾಳೆ. ಇದನ್ನು ನಂಬಿದ ಮುರುಗನ್ ಆಧಾರ್ ಪ್ರತಿ, ಬ್ಯಾಂಕ್ ಪುಸ್ತಕ ಹಾಗೂ ಎಟಿಎಂ ಕಾರ್ಡ್‌ನ ಕೊನೆಯ ಮೂರು ನಂಬರ್‌ಗಳನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸುವುದರ ಜತೆಗೆ ಮೊಬೈಲ್‌ಗೆ ಬಂದ ಒಟಿಪಿಯನ್ನೂ ತಿಳಿಸಿದ್ದಾರೆ. ಬಳಿಕ ನೋಡು ನೋಡುತ್ತಿದ್ದಂತೆ ಮುರುಗನ್ ಖಾತೆಯಿಂದ ಮೊದಲ ಬಾರಿಗೆ 97,000 ರೂ., ಎರಡನೇ ಬಾರಿಗೆ 55 ಸಾವಿರ ರೂ. ಕಡಿತಗೊಂಡಿದೆ.
ಬಳಿಕ ಮುರುಗನ್ ಭಾನುವಾರ ಕೊಳ್ಳೇಗಾಲ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸಂಪೂರ್ಣ ಮಾಹಿತಿ ಪಡೆದು ಮುಂದಿನ ಕ್ರಮ ವಹಿಸಿದ್ದಾರೆ.