ಜಿಲ್ಲೆ

ಜಿಲ್ಲಾ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ನೌಕರರ ಧರಣಿ ಮುಂದುವರಿಕೆ

ಕಾರವಾರ: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರು ಕಳೆದ ಮೂರು ದಿನಗಳಿಂದ ಕರ್ತವ್ಯ ಬಹಿಷ್ಕರಿಸಿ ನಡೆಸಿರುವ ಮುಷ್ಕರ ಮುಂದುವರಿದಿದ್ದು, ಗ್ರಾಮೀಣ ಭಾಗದ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ.
ಎರಡು ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದ್ದ ಗ್ರಾಮ ಪಂಚಾಯಿತಿ ನೌಕರರು ಸೋಮವಾರದಿಂದ ಕಾರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಧರಣಿ ಆರಂಭಿಸಿದರು. 500 ಕ್ಕೂ ಅಽಕ ನೌಕರರು ಜಿಲ್ಲಾಽಕಾರಿ ಕಚೇರಿಯಲ್ಲಿ ಟೆಂಟ್ ಹೊಡೆದು ಕುಳಿತಿದ್ದಾರೆ. ಜಿಲ್ಲೆಯ 229 ಗ್ರಾಮ ಪಂಚಾಯಿತಿಗಳು ಬಾಗಿಲು ಹಾಕಿದ್ದು, ಧರಣಿಯ ಬೋರ್ಡ್ ಅಳವಡಿಸಲಾಗಿದೆ.
ಗ್ರಾಪಂ ನೌಕರರ ಧರಣಿಗೆ ಗ್ರಾಪಂ ಜನಪ್ರತಿನಿಽಗಳ ಒಕ್ಕೂಟ ಬೆಂಬಲ ಸೂಚಿಸಿದ್ದು, ವಿವಿಧ ಗ್ರಾಪಂ ಅಧ್ಯಕ್ಷ, ಸದಸ್ಯರು ಧರಣಿಯಲ್ಲಿ ಪಾಲ್ಗೊಂಡರು. ಜಿಪಂ ಸಿಇಒ ಪರವಾಗಿ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ್ ಮನವಿ ಸ್ವೀಕರಿಸಿದರು. ಸರ್ಕಾರಕ್ಕೆ ಗ್ರಾಪಂ ನೌಕರರ ಪ್ರತಿಭಟನೆಯ ವಿವರ ಸಲ್ಲಿಸುವುದಾಗಿ ಭರವಸೆ ನೀಡಿದರು.
ಗ್ರಾಮೀಣಾಭಿವೃದ್ಧಿ ಸಚಿವರು ಅಕ್ಟೋಬರ್ 10 ರಂದು ಸಭೆ ನಡೆಸುವ ಭರವಸೆ ನೀಡಿದ್ದಾರೆ. ಎಷ್ಟೇ ದಿನ ಕಳೆದರೂ ಚಿಂತೆಯಿಲ್ಲ. ನಮ್ಮ ನಿರಂತರ ಧರಣಿ ಮುಂದುವರಿಯಲಿದೆ. ಗ್ರಾಮೀಣ ಸೇವೆಯಲ್ಲಿ ತೊಂದರೆ ಉಂಟಾದರೆ ಅದಕ್ಕೆ ಸರ್ಕಾರವೇ ಹೊಣೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಟಿ.ಸಿ.ಮಂಜುನಾಥ ತಿಳಿಸಿದ್ದಾರೆ.
ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಮೊದಲು ನಮ್ಮ ವಿವಿಧ ಸಂಘಟನೆಯ ನಡುವೆಯೇ ಭಿನ್ನಾಭಿಪ್ರಾಯವಿತ್ತು.ಮೊದಲ ಬಾರಿಗೆ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಎಲ್ಲ ಸಂಘಟನೆಗಳೂ ಒಟ್ಟಾಗಿ ಗ್ರಾಮ ಪಂಚಾಯಿತಿ ಕರ್ತವ್ಯ ಬಹಿಷ್ಕರಿಸಿದ್ದೇವೆ. ಸರ್ಕಾರ ಬ್ರಿಟೀಷ್ ನೀತಿ ಅನುಸರಿಸುತ್ತಿದೆ. ನಮ್ಮ ಬೇಡಿಕೆ ಈಡೇರುವವರೆಗೂ ನಾವು ಧರಣಿ ಹಿಂಪಡೆಯುವುದಿಲ್ಲ ಎಂದರು.
ಗ್ರಾಮ ಪಂಚಾಯಿತಿ ಕುಟುಂಬದ ಸಂಚಾಲಕ ಎಂ.ಕೆ.ಭಟ್ ಮಾತನಾಡಿ, ಎಲ್ಲ ಸೇವೆಗಳು ಗ್ರಾಮ ಪಂಚಾಯಿತಿಯಲ್ಲೇ ಎಂದು ಸರ್ಕಾರ ಹೇಳುತ್ತದೆ. ಗ್ರಾಮ ಪಂಚಾಯಿತಿಗಳಿಗೆ ಕೋಟ್ಯಂತರ ಅನುದಾನ ಬರುತ್ತದೆ ಎಂದು ಹೇಳಲಾಗುತ್ತದೆ. ಆದರೆ, ವಾಸ್ತವ ಹಾಗಿಲ್ಲ. ಸರ್ಕಾರಿ ಬರು ಅನುದಾನದ ಬಗ್ಗೆ ಇಲ್ಲಿನ ಸಿಬ್ಬಂದಿ ಬಗ್ಗೆ ಚಿಂತನೆ ಮಾಡುವುದೇ ಇಲ್ಲ. ಗ್ರಾಮ ಸಭೆ ಮಾಡಿ ಜನರ ಬಳಿ ಬೈಸಿಕೊಳ್ಳುವವರು ನಾವು ಎಂದರು. ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಅಣ್ಣಪ್ಪ ಸ್ವಾಗತಿಸಿದರು. ರಾಜೇಶ ನಾಯ್ಕ ನಿರೂಪಿಸಿದರು.

ಗ್ರಾಪಂ ನೌಕರರ ಬೇಡಿಕೆಗಳು

  • *ಪಿಡಿಒ ಹುದ್ದೆಯನ್ನು ಗ್ರೂಪ್ ಬಿ ದರ್ಜೆಗೆ ಉನ್ನತೀಕರಿಸಬೇಕು.
  • *ಏಳು ವರ್ಷ ಪೂರೈಸಿದ ಪಿಡಿಒಗಳನ್ನು ಬೇರೆ ತಾಲೂಕಿಗೆ ವರ್ಗಾವಣೆ ಮಾಡುವ ನಿಯಮ ಕೈಬಿಡಬೇಕು.
  • * ವರ್ಗಾವಣೆ ನಿಯಮದಲ್ಲಿ ಬದಲಾವಣೆ ಮಾಡುವ ಪೂರ್ವ ಸಂಘದ ಸಲಹೆ ಪಡೆಯಬೇಕು.
  • *ಪಿಡಿಒ ಜೇಷ್ಠತಾ ಪಟ್ಟಿಯನ್ನು ಕೂಡಲೇ ಅಂತಿಮಗೊಳಿಸಿ ಬಡ್ತಿ ನೀಡಬೇಕು.ಎಂಜಿಎನ್‌ಆರ್‌ಇಜಿಯ ಯೋಜನೆಯ ಅನುಷ್ಠಾನಗೊಳಿಸುವ ಗುರಿಯನ್ನು ಕೈಬಿಡಬೇಕು.
  • *ಕರ ವಸೂಲಿಗಾರ, ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್, ಸೀರಘಂಟಿ, ಜವಾನರು, ಸ್ವಚ್ಛತಾಗಾರ ಮುಂತಾದ ಗ್ರಾಪಂ ನೌಕರರಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಕನಿಷ್ಠ ವೇತನ ನಿಗದಿ ಮಾಡಬೇಕು.
  • *ಇಎಸ್‌ಐ ಮತ್ತು ಪಿಎಫ್ ಜಾರಿ ಮಾಡಬೇಕು. 5 ಲಕ್ಷ ರೂ. ಆರೋಗ್ಯ ವಿಮೆ ಸೌಲಭ್ಯ ನೀಡಬೇಕು. ಕರ ವಸೂಲಿಗಾರ, ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್ ವೃಂದದಿಂದ ಗ್ರೇಡ್ 2 ಮತ್ತು ಎಸ್‌ಡಿಎಎಎ ಸರ್ಕಾರದಿಂದ ನೇರ ನೇಮಕಾತಿ ಬದಲು ಬಡ್ತಿ ನೀಡಬೇಕು.