ರಾಯಚೂರು ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡುವ ನೌಕರರ ಕನಿಷ್ಠ ವೇತನವನ್ನು ನಿಗದಿಪಡಿಸಿ ಜಾರಿಗೊಳಿಸಲು ಒತ್ತಾಯಿಸಿ ಸೋಮವಾರ ಗ್ರಾಮ ಪಂಚಾಯತಿ ನೌಕರರು ಸಿಐಟಿಯು ನೇತೃತ್ವದಲ್ಲಿ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ಮಾಡಿದರು.
ಗ್ರಾಮ ಪಂಚಾಯತಿಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಕನಿಷ್ಠ ವೇತನ ನಿಗಪಡಿಸಲು ಸರ್ಕಾರ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದು, ಗ್ರಾಪಂಗಳಲ್ಲಿ ಕೆಲಸ ಮಾಡುವ ನೌಕರರನ್ನು ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಸುಪ್ರೀಂಕೋರ್ಟ್ ಮಾರ್ಗದರ್ಶನದಂತೆ ಕನಿಷ್ಠ ವೇತನ ನೀಡಲು ಸರ್ಕಾರ ಹಿಂದೇಟು ಹಾಕುತ್ತಿದೆಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
2021ರಲ್ಲಿ ಕನಿಷ್ಠ ವೇತನದ ಅಧಿಸೂಚನೆ ರದ್ದುಪಡಿಸಿ ಏಪ್ರೀಲ್ 2025 ರಲ್ಲಿ ಕನಿಷ್ಠ ವೇತನ ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಸಲ್ಲಿಸಲು ತಿಳಿಸಿತ್ತು, ಕರವಸೂಲಿ, ಗುಮಾಸ್ತ, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಮೂಲ ವೇತನ 38,021 ರೂ. ಮತ್ತು, ವಾಟರ್‌ಮ್ಯಾನ್‌ಗೆ 33,062 ರೂ. ಅಟೆಂಡರ್‌ಗೆ 28,750 ರೂ. ಮತ್ತು ಕಸಗೂಡಿಸುವರಿಗೆ 25 ಸಾವಿರ ನೀಡಲು ಒತ್ತಾಯಿಸಲಾಗಿತ್ತು. ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸೇವಾ ಹಿರಿತನದ ಮೇರೆಗೆ ಮಾನ್ಯತೆ ನೀಡಿ ಶೇ.2 ರಷ್ಟು ಹೆಚ್ಚಳ, ಪ್ರತಿವರ್ಷ ಪರಿಗಣಿಸಿ ಭತ್ಯೆ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಪ್ರ.ಕಾರ್ಯದರ್ಶಿ ಡಿಎಸ್ ಶರಣಬಸವ, ಆಂಜನೇಯ ಮಾಡಗಿರಿ, ಪಾಂಡುರಂಗ, ಮಲ್ಲಿಕಾರ್ಜುನ ಮನ್ಸಲಾಪೂರ, ಸುರೇಶ ದೇವಸೂಗುರು, ಜಂಬಣ್ಣ ಚಂದ್ರಬಂಡಾ, ಸುಬಾನ್, ಆಂಜನೇಯ, ಅಂಬಣ್ಣ, ವೀರೇಶ ಸೇರಿದಂತೆ ಅನೇಕರು ಇದ್ದರು.